ADVERTISEMENT

ಅಧಿಕಾರಿಗೆ ಬ್ಯಾಟ್‌ನಿಂದ ಥಳಿಸಿದ್ದ ಇಂದೋರ್‌ನ ಬಿಜೆಪಿ ಶಾಸಕ ಜೈಲಿನಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 6:06 IST
Last Updated 30 ಜೂನ್ 2019, 6:06 IST
   

ಇಂದೋರ್: ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗೆ ಬ್ಯಾಟ್‌ನಿಂದ ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯ್‌ವರ್ಗಿಯ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮಧ್ಯ ಪ್ರದೇಶದ ಬಿಜೆಪಿಯ ಹಿರಿಯ ನೇತಾರ ಕೈಲಾಶ್ ವಿಜಯ್‌ವರ್ಗಿಯಾ ಅವರ ಪುತ್ರ ಆಕಾಶ್ ವಿಜಯ್‌ವರ್ಗಿಯ ಅವರಿಗೆ ಶನಿವಾರ ಭೋಪಾಲದ ವಿಶೇಷ ನ್ಯಾಯಾಲಯ ಜಾಮೀನು ನೀಡಿತ್ತು.

ಭಾನುವಾರ ಜೈಲಿನಿಂದ ಹೊರಬರುತ್ತಿದ್ದಂತೆಯೇ ಆಕಾಶ್‌ಗೆ ಹೂವಿನ ಹಾರ ಹಾಕಿ ಕಾರ್ಯಕರ್ತರು ಬರ ಮಾಡಿಕೊಂಡಿದ್ದಾರೆ.

ನಾನು ಜೈಲಿನಲ್ಲಿ ಒಳ್ಳೆಯ ಕಾಲ ಕಳೆದಿದ್ದೇನೆ.ಈ ಪ್ರದೇಶ ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ನಾನು ದುಡಿಯುತ್ತೇನೆ ಎಂದು ಜೈಲಿನಿಂದ ಹೊರ ಬಂದ ಆಕಾಶ್ ಹೇಳಿದ್ದಾರೆ.

ADVERTISEMENT

ಆಕಾಶ್‌ಗೆ ಜಾಮೀನು ಸಿಕ್ಕಿದಾಗ ಆತನ ಬೆಂಬಲಿಗರು ಇಂದೋರ್‌ನಲ್ಲಿರುವ ಬಿಜೆಪಿ ಕಚೇರಿ ಮುಂದೆ ಆಕಾಶಕ್ಕೆ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ, ಜೈಲಿನಿಂದ ಸೀದಾ ಪಕ್ಷದ ಕಚೇರಿಗೆ ಹೋದ ಆಕಾಶ್‌ಗೆ ಅಲ್ಲಿಯೂ ಹೂವಿನಹಾರ ಹಾಕಿ ಸ್ವೀಕರಿಸಲಾಗಿದೆ.

ಇಂದೋರ್- 3 ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಯಾಗಿರುವ ಆಕಾಶ್, ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗೆ ಪೊಲೀಸ್ ಮತ್ತು ಮಾಧ್ಯಮದವರ ಮುಂದೆಯೇ ಕ್ರಿಕೆಟ್ ಬ್ಯಾಟ್‌ನಿಂದ ಥಳಿಸುತ್ತಿರುವ ವಿಡಿಯೊಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಇಂದೋರ್‌ನಲ್ಲಿ ಭೂಕಬಳಿಕೆ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಮೊದಲು ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಆಕಾಶ್ ಆಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಥಳಿಸಿದ್ದಾರೆ.

ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡ ಈ ಶಾಸಕ ಪೆಹಲೇ ಆವೇದನ್, ಫಿರ್ ನಿವೇದನ್ ಔರ್ ಫಿರ್ ಧನಾದನ್ ( ಮೊದಲು ವಿನಂತಿಸುವುದು, ಆಮೇಲೆ ಥಳಿಸುವುದು) ಎಂದಿದ್ದರ.ಈ ಘಟನೆ ಬಗ್ಗೆ ಗೃಹ ಸಚಿವ ಅಮಿತ್ ಶಾ ವರದಿ ಕೇಳಿದ್ದರು.

ಆದಾಗ್ಯೂ, ಬಿಜೆಪಿ ಕಾರ್ಯಕರ್ತರು ಆಕಾಶ್‌ಗೆ ಬೆಂಬಲ ಸೂಚಿಸಿ ಮುಂದೆ ಬಂದಿದ್ದರು.ಈತನನ್ನು ಬಂಧಿಸಿದಾಗ ಜೈಲಿನ ಹೊರಗೆ ಸಲ್ಯೂಟ್ ಆಕಾಶ್ ಜೀ ಎಂಬ ಪೋಸ್ಟರ್ ಕೂಡಾ ಕಾಣಿಸಿಕೊಂಡಿತ್ತು, ಆಮೇಲೆ ಅದನ್ನು ತೆಗೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.