ಅಲೀಗಡ: ಉತ್ತರ ಪ್ರದೇಶದ ಅಲೀಗಡ ಜಿಲ್ಲೆಯ ಅಪ್ಪರ್‌ಕೋಟ್ ಪ್ರದೇಶದಲ್ಲಿರುವ ಮಸೀದಿಯನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಮಾಹಿತಿ ಹಕ್ಕು ಕಾಯ್ದೆ (ಆಟಿಐ) ಅರ್ಜಿಗೆ ದೊರೆತ ಉತ್ತರದಿಂದ ತಿಳಿದುಬಂದಿದೆ. ಹೀಗಾಗಿ ಆ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು ಆಗ್ರಹಿಸಿದ್ದಾರೆ.
ಅಪ್ಪರ್‌ಕೋಟ್ ಪ್ರದೇಶದ ಜಾಮಾ ಮಸೀದಿ ಬಗ್ಗೆ ಆರ್‌ಟಿಐ ಕಾರ್ಯಕರ್ತ ಕೇಶವ್ ದೇವ್ ಶರ್ಮಾ ಎಂಬುವವರು ಅಲೀಗಡ ನಗರಪಾಲಿಕೆಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ಪಾಲಿಕೆ, 300 ವರ್ಷಗಳ ಹಳೆಯ ಮಸೀದಿ ಸಾರ್ವಜನಿಕ ಜಾಗದಲ್ಲಿದೆ ಎಂದು ಮಾಹಿತಿ ನೀಡಿತ್ತು.
‘ಜಾಮಾ ಮಸೀದಿಯೇ ಆಗಿರಲಿ ಬೇರೆ ಏನೇ ಆಗಿರಲಿ, ಅಕ್ರಮ ಅಕ್ರಮವೇ. ಅದನ್ನು ತೆರವುಗೊಳಿಸಬೇಕು. ಆರ್‌ಟಿಐ ಅಡಿ ದೊರೆತ ಮಾಹಿತಿ ಸಮಂಜಸವಾಗಿದೆ. ನಗರಪಾಲಿಕೆಯೂ ಮಸೀದಿ ಅಕ್ರಮವೆಂದು ಹೇಳಿದೆ. ಹೀಗಾಗಿ ಅದನ್ನು ಧ್ವಂಸಗೊಳಿಸುವುದೇ ಮುಂದಿನ ಹೆಜ್ಜೆ’ ಎಂದು ಬಿಜೆಪಿ ನಾಯಕಿ ಶಕುಂತಲಾ ಭಾರತಿ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ. ಆರ್‌ಟಿಐ ಅಡಿ ದೊರೆತಿರುವ ಮಾಹಿತಿ, ಸತ್ಯಾಂಶ ಪರಿಗಣಿಸಬೇಕು. ನಗರಪಾಲಿಕೆ ಹೇಳುತ್ತಿರುವುದನ್ನು ಪರಿಗಣಿಸಿ ಶೀಘ್ರವೇ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.