ADVERTISEMENT

Lok Sabha Polls 2024: ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧತೆಯಲ್ಲಿ ಬಿಜೆಪಿ

ಪಿಟಿಐ
Published 28 ಫೆಬ್ರುವರಿ 2024, 15:20 IST
Last Updated 28 ಫೆಬ್ರುವರಿ 2024, 15:20 IST
ಕಾಂಗ್ರೆಸ್‌–ಬಿಜೆಪಿ
ಕಾಂಗ್ರೆಸ್‌–ಬಿಜೆಪಿ    

ನವದೆಹಲಿ: ಲೋಕಸಭೆ ಚುನಾವಣೆಗೆ ಹಲವು ರಾಜ್ಯಗಳಲ್ಲಿ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಕುರಿತು ಬಿಜೆಪಿ ಬುಧವಾರ ಚಿಂತನಮಂಥನ ನಡೆಸಿದ್ದು, ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯ ಹೆಸರುಗಳನ್ನು ಅಂತಿಮಗೊಳಿಸಲು ಕೇಂದ್ರ ಚುನಾವಣಾ ಸಮಿತಿ ಗುರುವಾರ ಸಭೆ ಸೇರುವ ಸಾಧ್ಯತೆ ಇದೆ. 

ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಧ್ಯಪ್ರದೇಶ, ಹರಿಯಾಣ, ರಾಜಾಸ್ಥಾನ, ಉತ್ತರಾಖಂಡ ಹಾಗೂ ಇನ್ನಿತರ ರಾಜ್ಯಗಳೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿನ ಪಕ್ಷದ ನಾಯಕರ ಜತೆಗೆ ಬುಧವಾರ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಇದೇ ರೀತಿಯ ಸಭೆಗಳನ್ನು ಉತ್ತರಪ್ರದೇಶ, ಛತ್ತೀಸಗಢ, ತೆಲಂಗಾಣ ರಾಜ್ಯದ ನಾಯಕರ ಜತೆಗೂ ನಡೆಸಿದ್ದಾರೆ.

ಮೊದಲ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಂತಹ ಪ್ರಮುಖ ಅಗ್ರ ನಾಯಕರ ಹೆಸರು ಇರುವ ನಿರೀಕ್ಷೆ ಇದೆ. ಅಲ್ಲದೆ, 2019ರ ಚುನಾವಣೆಯಲ್ಲಿ ಬಿಜೆಪಿಯು ಗೆಲ್ಲದ ಅನೇಕ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಸಹ ಮೊದಲ ಪಟ್ಟಿಯಲ್ಲಿ ಸೇರಿವೆ ಎಂದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

2019ರ ಚುನಾವಣೆಗೆ ಪಕ್ಷವು ಪ್ರಕಟಿಸಿದ್ದ ಮೊದಲ ಪಟ್ಟಿಯಲ್ಲೇ ಮೋದಿ ಮತ್ತು ಶಾ ಅವರ ಹೆಸರು ಇದ್ದವು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾ ಗಾಂಧಿನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಮೊದಲ ಬಾರಿಗೆ ಅಖಾಡಕ್ಕಿಳಿದಿದ್ದರು.

ಏಪ್ರಿಲ್‌– ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವು 370 ಸ್ಥಾನಗಳನ್ನು, ಆಡಳಿತರೂಢ ಎನ್‌ಡಿಎ ಮೈತ್ರಿಕೂಟವು ಒಟ್ಟಾರೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಮೋದಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.