ಮುಂಬೈ: ಕ್ರೂಸ್ ಹಡಗಿನ ಮೇಲೆ ಮಾದಕದ್ರವ್ಯ ನಿಯಂತ್ರಣ ಬ್ಯೂರೊದವರು (ಎನ್‌ಸಿಬಿ) ದಾಳಿ ನಡೆಸಿ ಬಂಧಿಸಿದ ಇಬ್ಬರನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಒಬ್ಬರು ಬಿಜೆಪಿ ನಾಯಕರೊಬ್ಬರ ಸೋದರ ಸಂಬಂಧಿ (ಬಾವ) ಎಂದು ಎನ್‌ಸಿಪಿ ಆರೋಪಿಸಿದೆ.
ಎನ್‌ಸಿಬಿ ಪ್ರಾದೇಶಿ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಎನ್‌ಸಿಪಿ ವಕ್ತಾರ ಮತ್ತು ಸಚಿವ ನವಾಬ್ ಮಲಿಕ್, ಮಾದಕದ್ರವ್ಯ ನಿಯಂತ್ರಣ ಅಧಿಕಾರಿಗಳ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದಾರೆ.
‘ದಾಳಿಯ ನಂತರ ಎನ್‌ಸಿಬಿ ಅಧಿಕಾರಿ ವಾಂಖೆಡೆ ಅವರು 8 ರಿಂದ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು. ಒಂದು ವೇಳೆ 10 ಜನರನ್ನು ಹಿಡಿದಿದ್ದರೆ, ಇಬ್ಬರನ್ನು ಬಿಟ್ಟಿದ್ದು ಏಕೆ. ಆ ಇಬ್ಬರಲ್ಲಿ ಒಬ್ಬ ಬಿಜೆಪಿ ನಾಯಕರೊಬ್ಬರ ಬಾವ ಇದ್ದಾರೆ‘ ಎಂದು ಆರೋಪಿಸಿರುವ ಮಲಿಕ್, ‘ಪ್ರಕರಣದ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಅಧಿಕಾರಿಯೊಬ್ಬರು ಅಸ್ಪಷ್ಟವಾಗಿ ಹೇಗೆ ಉತ್ತರಿಸುತ್ತಾರೆ?‘ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕನ ಬಾವನ ಹೆಸರನ್ನು ಶನಿವಾರಯಲ್ಲಿ ಬಹಿರಂಗಪಡಿಸುವುದಾಗಿ ಮಲಿಕ್ ಹೇಳಿದರು.
ಉಪಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಸಂಬಂಧಿಸಿದ ವಾಣಿಜ್ಯ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಒಂದು ದಿನದ ನಂತರ, ಮಲಿಕ್ ಅವರು ಎನ್‌ಸಿಬಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.