ADVERTISEMENT

ತುರ್ತು ಪರಿಸ್ಥಿತಿಗೆ 50 ವರ್ಷ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಪಿಟಿಐ
Published 25 ಜೂನ್ 2024, 4:42 IST
Last Updated 25 ಜೂನ್ 2024, 4:42 IST
   

ನವದೆಹಲಿ: ಸ್ವತಂತ್ರ ಭಾರತದಲ್ಲಿ ಕರಾಳ ಅಧ್ಯಾಯ ತುರ್ತು ಪರಿಸ್ಥಿತಿ ಹೇರಿಕೆ. ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದ ತುರ್ತುಪರಿಸ್ಥಿತಿಗೆ 50 ವರ್ಷ ಸಂದಿದ್ದು, ಕಾಂಗ್ರೆಸ್‌ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಕಿಡಿಕಾರಿದ್ದಾರೆ.

'ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಮಹಾಪುರುಷರಿಗೆ ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುವ ದಿನವಾಗಿದೆ. #DarkDaysOfEmergency ಕಾಂಗ್ರೆಸ್ ಪಕ್ಷವು ಮೂಲಭೂತ ಸ್ವಾತಂತ್ರ್ಯಗಳನ್ನು ಹೇಗೆ ಬುಡಮೇಲು ಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯನು ಗೌರವಿಸುವ ಭಾರತದ ಸಂವಿಧಾನವನ್ನು ಹೇಗೆ ತುಳಿಯಿತು ಎಂಬುದನ್ನು ನಮಗೆ ನೆನಪಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಪ್ರಜಾಪ್ರಭುತ್ವವನ್ನು ಕೊಂದು ಅದಕ್ಕೆ ಪದೇ ಪದೇ ಹಾನಿ ಮಾಡುವ ವಿರೋಧ ಪಕ್ಷದ ಸುದೀರ್ಘ ಇತಿಹಾಸಕ್ಕೆ ಇದು ಅತಿದೊಡ್ಡ ಉದಾಹರಣೆಯಾಗಿದೆ’ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ADVERTISEMENT

ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು, 1975ರ ಜೂನ್‌ 24ರಂದು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಅದರ ಮರುದಿನವೇ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ‘ಇದು ಭಾರತೀಯ ಪ್ರಜಾಪ್ರಭುತ್ವದಲ್ಲಿ ಒಂದು ಕರಾಳ ಅಧ್ಯಾಯವಾಗಿದ್ದು ಅದನ್ನು ಮರೆಯಲಾಗದು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌  ಹೇಳಿದ್ದಾರೆ.

‘ಬಿ. ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ತುಳಿಯಲು ಯತ್ನಿಸಿದ ತುರ್ತು ಪರಿಸ್ಥಿತಿಯನ್ನು ಹೇರುವ ರಾಜಕೀಯ ಪ್ರೇರಿತ ನಿರ್ಧಾರ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನು ಅಲುಗಾಡಿಸಿದೆ. ನಮ್ಮ ಪಕ್ಷವು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಶ್ರಮಿಸಿದ ಸಂಪ್ರದಾಯಕ್ಕೆ ಸೇರಿದೆ ಎಂದು ನನಗೆ ಹೆಮ್ಮೆ ಇದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.