ಕೋಲ್ಕತ್ತ: ‘ಬಿಜೆಪಿ ಶಾಸಕರು ಸೇರಿದಂತೆ ಪಕ್ಷದ ಬಹುತೇಕ ನಾಯಕರು ಟಿಎಂಸಿಗೆ ಸೇರ್ಪಡೆಯಾಗಲು ಕಚೇರಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ’ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ಸಂಸರ್‌ಗಂಜ್ ಕ್ಷೇತ್ರದಲ್ಲಿ ಗುರುವಾರ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಪಕ್ಷಾಂತರ ಮಾಡುವವರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರೆ ಬಿಜೆಪಿ ಪ್ರಾಬಲ್ಯ ಮತ್ತಷ್ಟು ಕುಸಿಯಲಿದೆ’ ಎಂದು ಹೇಳಿದ್ದಾರೆ.
‘ಬಿಜೆಪಿಯವರು ಹೊರಗಿನವರು ಅವರಿಗೆ ಮತದಾರರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ಅಭಿಷೇಕ್ ಕರೆ ನೀಡಿದರು.
ಭವಾನಿಪುರ, ಮುರ್ಷಿದಾಬಾದ್ ಜಿಲ್ಲೆಯ ಸಂಸರ್‌ಗಂಜ್ ಮತ್ತು ಜಂಗೀಪುರ್ ಕ್ಷೇತ್ರಗಳ ಉಪಚುನಾವಣೆಯು ಸೆಪ್ಟೆಂಬರ್ 30ಕ್ಕೆ ನಿಗದಿಯಾಗಿದೆ. ಬಂಗಾಳ ವಿಧಾನಸಭೆಗೆ ನಡೆದ ಎಂಟು ಹಂತಗಳ ಚುನಾವಣೆ ವೇಳೆ ಸಂಸರ್‌ಗಂಜ್ ಮತ್ತು ಜಂಗೀಪುರ್ ಕ್ಷೇತ್ರಗಳಲ್ಲಿ ಮತದಾನ ನಡೆದಿರಲಿಲ್ಲ.
ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣಕ್ಕಿಳಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.