ಗುವಾಹಟಿ: ಮುಸ್ಲಿಮ್ ಸಂಘ ಸಂಸ್ಥೆಗಳ ಆಕ್ಷೇಪಣೆಗಳ ನಡುವೆಯೂ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಮುಂದಿನ ತಿಂಗಳಿನಿಂದ ಸರ್ಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಲು ನಿರ್ಧರಿಸಿದೆ.
‘ಸರ್ಕಾರದಿಂದ ಧನಸಹಾಯ ಪಡೆದ ಎಲ್ಲಾ ಮದರಸಾಗಳನ್ನು ಸ್ಥಗಿತಗೊಳಿಸಲು ಮುಂದಿನ ತಿಂಗಳು ಅಧಿಸೂಚನೆ ಹೊರಡಿಸಲಾಗುವುದು. ಧಾರ್ಮಿಕ ಶಿಕ್ಷಣವನ್ನು ಸರ್ಕಾರದ ಹಣದಲ್ಲಿ ನಡೆಸುವುದನ್ನು ನಾವು ವಿರೋಧಿಸುತ್ತೇವೆ. ಆದರೆ ಖಾಸಗಿ ಧನಸಹಾಯದೊಂದಿಗೆ ನಡೆಯುವುದನ್ನು ನಾವು ತಡೆಯಲು ಸಾಧ್ಯವಿಲ್ಲ’ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ಇದರ ಜೊತೆಗೆ, ರಾಜ್ಯ ಸರ್ಕಾರದ ಧನಸಹಾಯ ಪಡೆಯುವ ಎಲ್ಲಾ ಸಂಸ್ಕೃತ ಕಲಿಕಾ ಕೇಂದ್ರಗಳನ್ನೂ ಇದೇ ರೀತಿ ಮುಚ್ಚಲು ಮತ್ತೊಂದು ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದೂ ಶರ್ಮಾ ಹೇಳಿದರು.
ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ 2021ಕ್ಕೆ ನಿಗದಿಯಾಗಿದೆ. ಇದೇ ಕಾರಣಕ್ಕೆ ಮುಂದಿನ ತಿಂಗಳಿನಿಂದ ಎಲ್ಲಾ ಮದರಸಾಗಳನ್ನು ಮುಚ್ಚುವ ನಿರ್ಧಾವನ್ನು ಶರ್ಮಾ ಸರ್ಕಾರ ಕೈಗೊಂಡಿದೆ. ಇದು ರಾಜಕೀಯ ಲಾಭ ಪಡೆಯುವ ಹುನ್ನಾರ ಎಂದು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ.
ಅಸ್ಸಾಂನಲ್ಲಿ 614 ಸರ್ಕಾರಿ ಮದರಸಾಗಳು ಮತ್ತು ಸುಮಾರು 900 ಖಾಸಗಿ ಮದರಸಾಗಳಿವೆ. ಮತ್ತೊಂದೆಡೆ, ಸುಮಾರು 100 ಸರ್ಕಾರಿ ಸಂಸ್ಕೃತ ಕಲಿಕಾ ಕೇಂದ್ರಗಳಿವೆ. 500 ಕ್ಕೂ ಹೆಚ್ಚು ಖಾಸಗಿ ಕಲಿಕಾ ಕೇಂದ್ರಗಳಿವೆ.
ರಾಜ್ಯದ ಮದರಸಾಗಳಿಗಾಗಿ ಸರ್ಕಾರವು ವರ್ಷಕ್ಕೆ ಸುಮಾರು ₹3 ರಿಂದ ₹4 ಕೋಟಿ ನೀಡುತ್ತಿದೆ. ಸಂಸ್ಕೃತ ಕಲಿಕಾ ಕೇಂದ್ರಗಳಿಗಾಗಿ ₹1 ಕೋಟಿ ಖರ್ಚು ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.