ADVERTISEMENT

ತುರ್ತುಪರಿಸ್ಥಿತಿ: ಕಾಂಗ್ರೆಸ್ ವಿರುದ್ಧ ಎನ್‌ಡಿಎ ಪ್ರತಿಭಟನೆ

ಪಿಟಿಐ
Published 26 ಜೂನ್ 2024, 15:22 IST
Last Updated 26 ಜೂನ್ 2024, 15:22 IST
   

ನವದೆಹಲಿ: 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಬುಧವಾರ ಸಂಸತ್ ಭವನದಲ್ಲಿ ಪ್ರತಿಭಟನೆ ನಡೆಸಿದ ಎನ್‌ಡಿಎ ಸಂಸದರು, ಸಂವಿಧಾನವನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸಚಿವರು ಸೇರಿದಂತೆ ಎನ್‌ಡಿಎ ಸಂಸದರು ಭಾಗವಹಿಸಿದ್ದರು. 

ನರೇಂದ್ರ ಮೋದಿ ನೇತೃತ್ವದ ಬಿಜೆ‍ಪಿ ಸರ್ಕಾರ ಸಂವಿಧಾನದ ಮೌಲ್ಯಗಳ ಮೇಲೆ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಕೂಟದ ಮಿತ್ರಪಕ್ಷಗಳು ನಿರಂತರವಾಗಿ ಟೀಕಿಸಿದ್ದವು. ತುರ್ತುಪರಿಸ್ಥಿತಿಯ 49ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ತಿರುಗೇಟು ನೀಡಿತು.

ಇದಕ್ಕೂ ಮುನ್ನ ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು, ಕಲಾಪವನ್ನು ಮುಂದೂಡಿದರು. ತಕ್ಷಣ ಎನ್‌ಡಿಎ ಸಂಸದರು ಬಿಜೆಪಿ ನೇತೃತ್ವದಲ್ಲಿ ಸಂಸತ್‌ ಭವನದ ಹೊರಗೆ ಸೇರಿ, ಭಿತ್ತಿಫಲಕಗಳನ್ನು ಹಿಡಿದು ಘೋಷಣೆಗಳನ್ನು ಹಾಕಿದರು.

ADVERTISEMENT

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಲ್ಹಾದ ಜೋಶಿ, ಕಿರಣ್ ರಿಜಿಜು ಲಲನ್ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್ ಶೆಖಾವತ್ ಪ್ರತಿಭಟನಕಾರರ ಜತೆ ಸೇರಿದರು.

ಬಿಜೆಪಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಮಾತನಾಡಿ, ‘ಸಂವಿಧಾನದ ರಕ್ಷಣೆಯ ಮಾತನಾಡುವವರಿಗೆ ಮತ್ತು ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದಿರುವವರಿಗೆ ಕನ್ನಡಿ ಹಿಡಿಯಬೇಕಾದ ಅಗತ್ಯವಿದೆ. ಅವರು ಸಂವಿಧಾನವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದವರು. ಹೀಗಾಗಿಯೇ ನಾವು ‘ರಾಹುಲ್ ಗಾಂಧಿ ಕ್ಷಮೆ ಕೇಳಿ’ ಎಂಬ ಘೋಷಣೆ ಕೇಳುತ್ತಿರುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.