ಭೋಪಾಲ್: ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸುಮಾರು 450 ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಹಿಮಾಲಯದಲ್ಲಿ ಕಳೆದ ಎರಡೂವರೆ ತಿಂಗಳುಗಳಲ್ಲಿ ವಿವಿಧ ರಾಜ್ಯಗಳ ಯಾತ್ರಿಕರನ್ನು ನಾನು ಭೇಟಿಯಾಗಿದ್ದೇನೆ. ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತ್ರ ಮಾತನಾಡಿದ್ದಾರೆ. ವಿರೋಧ ಪಕ್ಷ ಒಂದೇ ಒಂದು ಸ್ಥಾನಕ್ಕೂ ಯೋಗ್ಯವಾಗಿಲ್ಲ. ಏಕೆಂದರೆ ಅವರು ಮೋದಿ ಅವರನ್ನು ನಿಂದಿಸುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ' ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ‘ಹ್ಯಾಟ್ರಿಕ್’ ಗೆಲುವಿನತ್ತ ಮುನ್ನಡೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಎನ್‌ಡಿಎಗೆ 350ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.
‘ಇಂಡಿಯಾ ಟಿವಿ –ಸಿಎನ್ಎಕ್ಸ್’ ಸಮೀಕ್ಷೆಯು ಎನ್‌ಡಿಎಗೆ ಅತಿಹೆಚ್ಚು ಸ್ಥಾನಗಳನ್ನು ಅಂದಾಜು ಮಾಡಿದ್ದು, 371 ರಿಂದ 401 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದೆ.
ಮತಗಟ್ಟೆ ಸಮೀಕ್ಷೆಗಳ ಅಂದಾಜು ಏನೇ ಇರಲಿ, ಆದರೆ ನನ್ನ ಅಂದಾಜಿನ ಪ್ರಕಾರ ಎನ್‌ಡಿಎ 450 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಉಮಾಭಾರತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.