ಅಲೀರಾಜಪುರ (ಮಧ್ಯಪ್ರದೇಶ): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಕನಿಷ್ಠ 150 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದರು.
ಮಧ್ಯಪ್ರದೇಶದ ಅಲೀರಾಜಪುರ ಜಿಲ್ಲೆಯ ಜೋಬಟ್ ನಗರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿಯ ಶೇ 50ರ ಮಿತಿಯನ್ನು ಕಾಂಗ್ರೆಸ್ ಸರ್ಕಾರವು ತೆಗೆದುಹಾಕಲಿದೆ ಎಂದು ತಿಳಿಸಿದರು.
ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ಪುನರುಚ್ಚರಿಸಿದ ಅವರು, ಅದು ದೇಶದ ರಾಜಕಾರಣದ ದಿಕ್ಕು ಬದಲಿಸಲಿದೆ ಎಂದು ಅಭಿಪ್ರಾಯಪಟ್ಟರು.
‘ಬಿಜೆಪಿ ನಾಯಕರು ಆದಿವಾಸಿಗಳು, ದಲಿತರು, ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ನಾವು ಅದನ್ನು ತಡೆಯಬೇಕಿದೆ’ ಎಂದು ಹೇಳಿದರು.
ಮೋದಿ ಅವರು 22 ಮಂದಿ ಶತಕೋಟ್ಯಧಿಪತಿಗಳತ್ತ ಮಾತ್ರವೇ ಗಮನ ಹರಿಸಿ ಅವರ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು ಎಂದು ಆರೋಪಿಸಿದ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಿದೆ ಎಂದು ಭರವಸೆ ನೀಡಿದರು.
ನಂತರ ಖರಗೋನ್ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅವರು, ‘ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಭೂಮಿ, ನೀರು, ಅರಣ್ಯದ ಮೇಲಿನ ನಿಮ್ಮ ಹಕ್ಕು ಅಂತ್ಯವಾಗುತ್ತದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ನಾಶವಾಗಲಿವೆ ಮತ್ತು ಕೇವಲ 20ರಿಂದ 25 ಜನರ ಆಡಳಿತವು ಆರಂಭವಾಗುತ್ತದೆ. ಅದಾನಿಯಂತಹ ಕೋಟ್ಯಧಿಪತಿಗಳು ನಿಮ್ಮ ಭೂಮಿ, ನೀರು ಮತ್ತು ಅರಣ್ಯವನ್ನು ಬಯಸುತ್ತಾರೆ ಮತ್ತು ಅವನ್ನು ನಿಮ್ಮಿಂದ ಕಸಿದುಕೊಂಡು ಅವರಿಗೆ ಕೊಡಲಾಗುತ್ತದೆ’ ಎಂದು ಹೇಳಿದರು.
ರಾಹುಲ್ ಹೇಳಿದ್ದು..
ಬಿಜೆಪಿ ‘ಅಬ್‌ಕಿ ಬಾರ್ 400 ಪಾರ್’ ಎನ್ನುವ ಘೋಷಣೆ ಹೊರಡಿಸಿದೆ. 400 ಪಕ್ಕಕ್ಕಿಡಿ, ಅವರು 150 ಸ್ಥಾನಗಳನ್ನೂ ಗೆಲ್ಲುವುದಿಲ್ಲ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ರೈತರ ಬೆಳೆಗಳಿಗೆ ನೀಡಲಾಗುವ ‘ಕನಿಷ್ಠ ಬೆಂಬಲ ಬೆಲೆ’ಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಲಾಗುವುದು.
ನರೇಗಾ ಅಡಿ ನೀಡಲಾಗುವ ಕನಿಷ್ಠ ಕೂಲಿಯನ್ನು ನಮ್ಮ ಸರ್ಕಾರ ₹250ರಿಂದ ₹400ಕ್ಕೆ ಹೆಚ್ಚಿಸಲಿದೆ.
ವಿಮಾನ ನಿಲ್ದಾಣಗಳು, ವಿದ್ಯುತ್ ಕೇಂದ್ರಗಳು ಮತ್ತು ಮೂಲಸೌಕರ್ಯವನ್ನು ಮೋದಿ ಈಗಾಗಲೇ 22–25 ಮಂದಿ ಕೋಟ್ಯಧಿಪತಿಗಳಿಗೆ ನೀಡಿದ್ದಾರೆ.
ಮೋದಿ ಅವರು ಅದಾನಿಯಂತಹ ಜನರ ಸಾಲ ಮನ್ನಾ ಮಾಡಿದ್ದಾರೆ. ನರೇಗಾದ 24 ವರ್ಷಗಳ ಖರ್ಚಿನ ಮೊತ್ತವನ್ನು ಅವರು ಅಂಥವರಿಗೆ ನೀಡಿದ್ದಾರೆ. ಆದರೆ, ಬಡವರು ಮತ್ತು ರೈತರ ಸಾಲ ಮನ್ನಾ ಮಾಡಲಿಲ್ಲ.
ಅದಾನಿ ಎಷ್ಟು ತೆರಿಗೆ ಕಟ್ಟುತ್ತಾರೋ ನೀವೂ ಅಷ್ಟೇ ತೆರಿಗೆ ಕಟ್ಟುತ್ತಿದ್ದೀರಿ. ಆದರೆ, ನೀವು ಕಟ್ಟಿದ ತೆರಿಗೆಯ ಫಲ ನಿಮಗೆ ಸಿಗುತ್ತಿಲ್ಲ.
ಜಿಎಸ್‌ಟಿ ಮತ್ತು ನೋಟು ರದ್ದತಿಯಿಂದ ಸಣ್ಣ ಉದ್ದಿಮೆಗಳು ಬಾಗಿಲು ಮುಚ್ಚಿದರೆ, ಅದಾನಿಯಂಥ ದೊಡ್ಡ ಉದ್ಯಮಿಗಳಿಗೆ ಅನುಕೂಲವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.