ನವದೆಹಲಿ: ಬಾಕಿಯಿರುವ ವಿದ್ಯಾರ್ಥಿಗಳ ಹಾಗೂ ಆಕಾಂಕ್ಷಿಗಳ ವೀಸಾ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವರಿ ಮಾಡುವಂತೆ ಬಿಜೆಪಿ ಲೋಕಸಭಾ ಸದಸ್ಯ ಗೋಪಾಲ ಶೆಟ್ಟಿ ಅವರು ಒತ್ತಾಯಿಸಿದ್ದಾರೆ. ವಿದೇಶಗಳ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ಈ ವಿಚಾರವನ್ನು ಗೋಪಾಲ ಶೆಟ್ಟಿ ಪ್ರಸ್ತಾಪಿಸಿದರು. ಕೋವಿಡ್ ಸೋಂಕು ಮತ್ತು ಉಕ್ರೇನ್ ಸಂಘರ್ಷದ ಸಂದರ್ಭ ಭಾರತಕ್ಕೆ ಮರಳಿರುವ ಹಲವಾರು ವಿದ್ಯಾರ್ಥಿಗಳು ಇದೀಗ ವಿದೇಶದಲ್ಲಿ ಶಿಕ್ಷಣ ಮುಂದುವರಿಸಲು ವೀಸಾ ಪಡೆಯಲು ಕಷ್ಟಪಡುತ್ತಿದ್ದಾರೆ ಎಂದರು.
ಹಲವು ವಿದ್ಯಾರ್ಥಿಗಳು 10-15 ಲಕ್ಷ ಶುಲ್ಕವನ್ನು ಪಾವತಿಸಿದ್ದಾರೆ. ಹಲವು ರಾಯಭಾರ ಕಚೇರಿಗಳು ಇನ್ನೂ ಮುಚ್ಚಿರುವುದರಿಂದ ವಿದೇಶದಲ್ಲಿ ಮರಳಿ ಶಿಕ್ಷಣ ಮುಂದವರಿಸಲು ಕಷ್ಟವಾಗುತ್ತಿದೆ. ಮುಖ್ಯವಾಗಿ ಕೆನಡಾಕ್ಕೆ ತೆರಳಬೇಕಿರುವವರಿಗೆ ಸಮಸ್ಯೆಯಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ವೀಸಾ ಅರ್ಜಿಗಳು ಬಾಕಿಯಿವೆ ಎಂದು ಗೋಪಾಲ ಶೆಟ್ಟಿ ವಿವರಿಸಿದರು.
ವೀಸಾ ಸಮಸ್ಯೆಯಿಂದಾಗಿ ಗುಜರಾತ್‌ನ ಸಾಂಸ್ಕೃತಿಕ ತಂಡಗಳಿಗೆ ಅಮೆರಿಕದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ವೀಸಾ ಪಡೆಯಲು ಸಮಸ್ಯೆಯಾಗಿರುವ ರಾಷ್ಟ್ರಗಳ ಜೊತೆಗೆ ಮಾತುಕತೆ ನಡೆಸಿ ಪರಿಹರಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.