ತಿರುವನಂತಪುರಂ: ಕೇರಳದಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನುಪಿಣರಾಯಿ ನೇತೃತ್ವದ ಎಲ್‌ಡಿಎಫ್ ಸರ್ಕಾರ ಅನುಷ್ಠಾನಕ್ಕೆ ತಂದಾಗ ಇದು ಹಿಂದೂ ಸಂಪ್ರದಾಯಕ್ಕೆ ವಿರುದ್ಧ, ಸುಪ್ರೀಂಕೋರ್ಟ್‌ನ ಈ ನಿರ್ಧಾರದಿಂದ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂಬುದಾಗಿತ್ತು ಕೇರಳ ಬಿಜೆಪಿ ನಿಲುವು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶಬರಿಮಲೆ ವಿಷಯವನ್ನೇ ಮುಖ್ಯ ವಿಷಯವಾಗಿಸಿಕೊಂಡು ಬಿಜೆಪಿ ಕಣಕ್ಕಿದಿತ್ತು. ಕೇರಳದಲ್ಲಿಯೂ ಹಿಂದುತ್ವ ವಿಚಾರಧಾರೆಗಳಮೂಲಕ ಜನಮತ ಸೆಳೆಯುವ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು.ಇದರ ಜತೆಗೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಬೇಕು, ಇಡೀ ದೇಶದಲ್ಲಿ ಮೋದಿ ಅಲೆ ಇರುವಾಗ ಕೇರಳದಲ್ಲಿಯೂ ಇದು ಪ್ರತಿಫಲಿಸುತ್ತದೆ ಎಂಬ ಆತ್ಮವಿಶ್ವಾಸ ಬಿಜೆಪಿಗೆ ಇತ್ತು.
ಕುಮ್ಮನಂ ರಾಜಶೇಖರನ್ ಅವರು ಕಣಕ್ಕಿಳಿಸುವಮೂಲಕ ಬಿಜೆಪಿ ತಿರುವಂತಪುರಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್‌ಗೆ ಪೈಪೋಟಿ ನೀಡಿತು. ಮತಗಟ್ಟೆ ಸಮೀಕ್ಷೆಗಳು ಕುಮ್ಮನಂ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಫಲಿತಾಂಶ ಪ್ರಕಟವಾದಾಗ ಕುಮ್ಮನಂ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.ಇನ್ನುಶಬರಿಮಲೆ ದೇವಾಲಯವಿರುವ ಪತ್ತನಂತಿಟ್ಟದಲ್ಲಿ ಕೆ.ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದರೂ ಬಿಜೆಪಿಗೆ ಜನ ಪ್ರೀತಿ ಗಳಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಸುರೇಂದ್ರನ್ ಮೂರನೇ ಸ್ಥಾನ ಗಳಿಸಿದ್ದಾರೆ.
'ನನಗೆ ಈ ತ್ರಿಶ್ಶೂರ್ ಬೇಕು , ನೀವು ನನಗೆ ತ್ರಿಶ್ಶೂರ್ ಕೊಡಿ ನಾನು ಈ ತ್ರಿಶ್ಶೂರನ್ನು ತೆಗೆದುಕೊಳ್ಳುತ್ತೇನೆ'ಎಂದು ಡೈಲಾಗ್ ಹೊಡೆದಿದ್ದ ನಟ, ರಾಜಕಾರಣಿ ಸುರೇಶ್ ಗೋಪಿಗೆ ಬಿಜೆಪಿ ನಿರೀಕ್ಷಿಸಿದಷ್ಟು ಮತಗಳೂ ಸಿಗಲಿಲ್ಲ.
ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶ ಬರುವವರೆಗೆ ಕೇರಳದಲ್ಲಿ ಬಿಜೆಪಿ ಸುಮ್ಮನಿತ್ತು.ಆದರೆ ಕೇರಳದಲ್ಲಿ ಕೆಲಸ ಇನ್ನಷ್ಟು ಚುರುಕಾಗಿ ಮಾಡಬೇಕೆಂದು ಕೇಂದ್ರ ಬಿಜೆಪಿ ನಾಯಕರಿಂದ ಆದೇಶ ಬಂದೊಡನೆ ಎಲ್‌ಡಿಎಫ್ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಲ್ಲಲು ಸಿಕ್ಕಿದ ವಿಷಯವಾಗಿತ್ತು ಶಬರಿಮಲೆ.
ಶಬರಿಮಲೆ ಧಾರ್ಮಿಕ ವಿಷಯವಾಗಿದ್ದರಿಂದ ಅದನ್ನು ರಾಜಕೀಯಕ್ಕೆ ಚೆನ್ನಾಗಿ ಬಳಸಿಕೊಳ್ಳುವುದರಲ್ಲಿ ಬಿಜೆಪಿ ತಂತ್ರ ಸಫಲವಾಗಿತ್ತು. ಹಿಂದೂ ಸಂಘಟನೆಗಳ ಬೆಂಬಲವಿರುವ ಕುಮ್ಮನಂ ಇದಕ್ಕೆ ಶಕ್ತಿ ನೀಡಿದಾಗ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುಲ ಕನಸು ಕಾಣ ತೊಡಗಿತು. ಕಳೆದ ಬಾರಿ ಒ.ರಾಜಗೋಪಾಲನ್ ಅವರು ಶಶಿ ತರೂರ್ ವಿರುದ್ಧ ಸ್ಪರ್ಧಿಸಿ 15,740 ಮತಗಳಿಂದ ಪರಾಭವಗೊಂಡಿದ್ದರು.ಶಶಿ ತರೂರ್ ಅವರಿಗೆ ತಿರುವನಂತಪುರಂನಲ್ಲಿ ಬೆಂಬಲ ಕಡಿಮೆಯಾಗುತ್ತಿದೆ ಎಂಬ ಸಂಗತಿ ತಿಳಿದ ಕೂಡಲೇ ಎಚ್ಚೆತ್ತ ಬಿಜೆಪಿ, ತಮ್ಮ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿತು.ಕುಮ್ಮನಂ ಅವರ ಪ್ರಚಾರಕ್ಕೆ ಆರ್‌ಎಸ್ಎಸ್ ಕಣಕ್ಕಿಳಿಯುವ ಮೂಲಕ ಅಲ್ಲಿನ ಚಿತ್ರಣವೇ ಬದಲಾಯಿತು.
ಶಬರಿಮಲೆ ವಿಷಯದ ಮೂಲಕವೇ ಗೆಲುವು ಸಾಧಿಸಬಹುದು ಎಂದು ಬಿಜೆಪಿ ನಿರೀಕ್ಷಿಸಿದ್ದ ಲೋಕಸಭಾ ಕ್ಷೇತ್ರ ಪತ್ತನಂತಿಟ್ಟ.ಇಲ್ಲಿಯೂ ಬಿಜೆಪಿಗೆ ಮುಖಭಂಗವಾಗಿದೆ. ಅಡೂರ್ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕೆ.ಸುರೇಂದ್ರನ್ ಅವರು ಎರಡನೇ ಸ್ಥಾನ ಗಳಿಸಿದ್ದಾರೆ. ಇನ್ನುಳಿದ ಕ್ಷೇತ್ರಗಳಲ್ಲಿ ಸುರೇಂದ್ರನ್ ಮೂರನೇ ಸ್ಥಾನದಲ್ಲಿದ್ದಾರೆ.
ತ್ರಿಶ್ಶೂರ್‌ನಲ್ಲಿ ಸಾಕಷ್ಟು ಸದ್ದು ಮಾಡಿದ್ದರೂ ಸುರೇಶ್ ಗೋಪಿಗೆ ಇಲ್ಲಿ ಜನರ ಮತಗಳಿಸಲು ಸಾಧ್ಯವಾಗಲಿಲ್ಲ. ಎರ್ನಾಕುಳಂನಲ್ಲಿ ಓಡಿಕೊಂಡು, ಜಿಗಿದುಕೊಂಡ, ಇನ್ನು ಹತ್ತು ಹಲವು ಕಸರತ್ತುಗಳನ್ನು ಮಾಡಿ ಟ್ರೋಲ್‌ಗಳಿಗೆ ಆಹಾರವಾಗುತ್ತಾ ಪ್ರಚಾರ ಮಾಡಿದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತ್ತಾನಂ ಕೂಡಾ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿ ಬಂತು.
ಶಬರಿಮಲೆ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿ ಕೇರಳದಲ್ಲಿ ಕಮಲ ಅರಳಿಸುವ ಉದ್ದೇಶ ಹೊಂದಿದ್ದ ಬಿಜೆಪಿಗೆ ಈ ಬಾರಿ ಸಿಕ್ಕಿದಮತಗಳು ಜಾಸ್ತಿಯಾಗಿದ್ದರೂ, ಖಾತೆ ತೆರೆಯುವ ಕನಸು ಮಾತ್ರ ಕನಸಾಗಿಯೇ ಉಳಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.