ADVERTISEMENT

ಬಿಹಾರ | ಭಾರತ ರತ್ನವನ್ನು ಬಿಜೆಪಿ ‘ಡೀಲ್‌’ ಮಾಡುತ್ತಿದೆ: RJD ತೇಜಸ್ವಿ ಆರೋಪ

ಏಜೆನ್ಸೀಸ್
Published 12 ಫೆಬ್ರುವರಿ 2024, 10:34 IST
Last Updated 12 ಫೆಬ್ರುವರಿ 2024, 10:34 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   ಪಿಟಿಐ ಚಿತ್ರ

ಪಾಟ್ನಾ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಬಿಜೆಪಿಯು ‘ಡೀಲ್‌’ ಮಾಡುತ್ತಿದೆ’ ಎಂದು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಸೋಮವಾರ ಆರೋಪಿಸಿದ್ದಾರೆ.

‘ಬಿಹಾರದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿಯು ಮರಣೋತ್ತರವಾಗಿ ಲಭಿಸಿದ್ದು ಸಂತೋಷವೇ. ಆದರೆ ಬಿಜೆಪಿಯು ನಮ್ಮೊಂದಿಗೆ ‘ಡೀಲ್’ (ಒಪ್ಪಂದ) ಮಾಡಿಕೊಳ್ಳಿ. ನಾವು ನಿಮಗೆ ಭಾರತ ರತ್ನ ಕೊಡುತ್ತೇವೆ ಎಂಬಂತೆ ವ್ಯವಹರಿಸುತ್ತಿದೆ’ ಎಂದು ಬಿಹಾರ ವಿಧಾನಸಭೆಯಲ್ಲಿ ಸೋಮವಾರ ನಡೆದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ಬಹುಮತ ಸಾಬೀತು ಸಂದರ್ಭದಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.

‘ಹೊಸ ಸರ್ಕಾರದ ವಿರುದ್ಧ ನನ್ನ ನಿಲುವಿದೆ. ಆದರೆ 9ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದ ನಿತೀಶ್ ಕುಮಾರ್ ಅವರಿಗೆ ಧನ್ಯವಾದಗಳನ್ನೂ ಇದೇ ಸಂದರ್ಭದಲ್ಲಿ ಅರ್ಪಿಸುತ್ತೇನೆ’ ಎಂದಿದ್ದಾರೆ.

ADVERTISEMENT

ನಿತೀಶ್ ಕುಮಾರ್ ಅವರ ಸೋದರಳಿಯ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ತೇಜಸ್ವಿ ಅವರು, ಬಿಜೆಪಿಯ ನಾಗಾಲೋಟವನ್ನು ತಡೆಯುತ್ತೇವೆ ಎಂದು ಗುಡುಗಿದ್ದಾರೆ.

‘ನಾವು ಸಮಾಜವಾದಿ ಪರಿವಾರದವರು. ನೀವು ನಮ್ಮ ಕುಟುಂಬದ ಸದಸ್ಯರು ಎಂದೇ ಭಾವಿಸಿದ್ದೇವೆ. ದೇಶದಲ್ಲಿ ಮೋದಿ ಅವರ ಓಟವನ್ನು ತಡೆಯುವ ಸಂಕಲ್ಪವನ್ನು ನೀವು ಮಾಡಿದ್ದಿರಿ. ಈಗ ನಿಮ್ಮ ಈ ಅಳಿಯ ಅದೇ ಸಂಕಲ್ಪದೊಂದಿಗೆ ಬಿಹಾರದಲ್ಲಿ ಮೋದಿಯನ್ನು ತಡೆಯುವ ಸಂಕಲ್ಪ ಮಾಡಿದ್ದಾನೆ’ ಎಂದು ತೇಜಸ್ವಿ ಹೇಳಿದರು.

‘ಜೆಡಿಯು ಪಕ್ಷದ ಶಾಸಕರ ಸ್ಥಿತಿ ನಿಜಕ್ಕೂ ಶೋಚನೀಯ. ಒಂದೇ ಅವಧಿಯಲ್ಲಿ ನಿತೀಶ್ ಕುಮಾರ್ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಪ್ರತಿಬಾರಿಯೂ ಬಣ ಬೇರೆ. ಜನರ ಪ್ರಶ್ನೆಗಳಿಗೆ ಶಾಸಕರು ಉತ್ತರ ಕೊಡಬೇಕಾದ ಸ್ಥಿತಿ ಇದೆ’ ಎಂದರು.

ಹಿಂದುಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಮುಖಂಡ ಜಿತನ್‌ ರಾಮ್ ಮಾಂಜಿ ಅವರು ಜೆಡಿಯು ಜತೆ ಎನ್‌ಡಿಎ ಒಕ್ಕೂಟ ಸೇರಿದ್ದಾರೆ. ಅವರ ಕುರಿತು ಮಾತನಾಡಿದ ತೇಜಸ್ವಿ, ‘ನಿತೀಶ್ ಅವರಿಗೆ ಯಾರೋ ತಪ್ಪು ಔಷಧ ನೀಡಿದ ಪರಿಣಾಮ ಅವರ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಅವರನ್ನು ಚಿಕಿತ್ಸೆಗೆ ಒಳಪಡಿಸಬೇಕು ಎಂದು ಮಾಂಜಿ ಅವರು ಕಳೆದ ಅಧಿವೇಶನದಲ್ಲಿ ಹೇಳಿದ್ದರು. ಅವರ ಮಾತುಗಳಿಗೆ ನಿತೀಶ್ ಕೆಂಡಾಮಂಡಲರಾಗಿದ್ದರು. ಈಗ ಮಾಂಜಿ ಅವರ ನಿತೀಶ್ ಅವರಿಗೆ ಸರಿಯಾದ ಚಿಕಿತ್ಸೆ ಕೊಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ’ ಎಂದು ತೇಜಸ್ವಿ ವ್ಯಂಗ್ಯವಾಡಿದರು.

ಕಳೆದ ಜನವರಿಯಲ್ಲಿ ಇಂಡಿಯಾ ಒಕ್ಕೂಟದ ಸಂಚಾಲಕ ಹುದ್ದೆಗೆ ಆಯ್ಕೆಯಾದಾಗ ನಿತೀಶ್ ಅವರು ಅದನ್ನು ನಯವಾಗಿ ತಿರಿಸ್ಕರಿಸಿದ್ದರು. ನಂತರ ಬಿಹಾರದಲ್ಲಿದ್ದ ಮಹಾಘಟಬಂಧನ್‌ನಿಂದ ಹೊರಬಂದ ನಿತೀಶ್, ಬಿಜೆಪಿ ನೇತೃತ್ವದ ಎನ್‌ಡಿಎ ಸೇರುವ ಮೂಲಕ ಹೊಸ ಮೈತ್ರಿ ಸರ್ಕಾರ ರಚಿಸಿದರು. ಆರ್‌ಜೆಡಿಯೊಂದಿಗಿನ 18 ತಿಂಗಳ ಮೈತ್ರಿಗೆ ಜ. 28ರಂದು ರಾಜೀನಾಮೆ ಸಲ್ಲಿಸುವ ಮೂಲಕ ಕೊನೆಗಾಣಿಸಿದರು.

243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 45 ಶಾಸಕರನ್ನು ಹೊಂದಿದೆ. ಬಿಜೆಪಿ ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ ಕ್ರಮವಾಗಿ 79 ಹಾಗೂ 4 ಶಾಸಕರನ್ನು ಹೊಂದಿವೆ. ಸ್ವತಂತ್ರ ಅಭ್ಯರ್ಥಿಯೊಬ್ಬರ ಬೆಂಬಲದಿಂದ ಈ ಒಕ್ಕೂಟದ ಒಟ್ಟು ಸದಸ್ಯಬಲ 128 ಆಗಲಿದೆ. ಮತ್ತೊಂದೆಡೆ ಮಹಾಘಟಬಂಧನದ ಬಳಿ 115 ಶಾಸಕರ ಬಲವಿದೆ. ಬಹುಮತ ಸಾಬೀತುಪಡಿಸಲು 122 ಸ್ಥಾನಗಳು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.