ADVERTISEMENT

ಬಿಜೆಪಿಯ ಸರ್ಕಾರ ರಚನೆ ವಿಶ್ವಾಸ ಕುದುರೆ ವ್ಯಾಪಾರದ ಸುಳಿವು ನೀಡುತ್ತಿದೆ: ಶಿವಸೇನಾ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 9:28 IST
Last Updated 16 ನವೆಂಬರ್ 2019, 9:28 IST
ಉದ್ಧವ್ ಠಾಕ್ರೆ- ಆದಿತ್ಯ ಠಾಕ್ರೆ
ಉದ್ಧವ್ ಠಾಕ್ರೆ- ಆದಿತ್ಯ ಠಾಕ್ರೆ   

ಮುಂಬೈ: ಆರಂಭದಲ್ಲಿ ಹಿಂದೆ ಸರಿದಿದ್ದ ಬಿಜೆಪಿ ಇದೀಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ವಿಶ್ವಾಸವನ್ನು ಹೊರಹಾಕಿರುವುದರ ಹಿಂದೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಸೋಗಿನಲ್ಲಿ ಕುದುರೆ ವ್ಯಾಪಾರ ಮಾಡುವ ಉದ್ದೇಶವನ್ನಿಟ್ಟುಕೊಂಡಿರುವುದು ಸ್ಪಷ್ಟವಾಗಿದೆ ಎಂದು ಶಿವಸೇನಾ ಶನಿವಾರ ಆರೋಪಿಸಿದೆ.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ, ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ನಡುವಿನ ಮೈತ್ರಿಯು ಆರು ತಿಂಗಳಿಗೂ ಹೆಚ್ಚುಕಾಲ ಉಳಿಯುವುದಿಲ್ಲ ಎಂದಿರುವ ಮಹಾರಾಷ್ಟ್ರ ಉಸ್ತುವಾರಿ ಸಿಎಂ ದೇವೇಂದ್ರ ಫಡಣವೀಸ್ ಅವರ ವಿರುದ್ಧವೂ ಕಿಡಿಕಾರಿರುವ ಸೇನಾ, ಹೊಸ ರಾಜಕೀಯ ಸಮೀಕರಣವು "ಹಲವಾರು ಜನರಿಗೆ ಹೊಟ್ಟೆ ನೋವು" ತರಿಸಿದೆ ಎಂದು ಹೇಳಿದೆ.

ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಶುಕ್ರವಾರ, ಆದಷ್ಟು ಬೇಗ ಮಹಾರಾಷ್ಟ್ರದಲ್ಲಿ ನಾವು ಸರ್ಕಾರ ರಚಿಸುತ್ತೇವೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ನಮ್ಮ ಪಕ್ಷಕ್ಕೆ 119 ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೇನಾ, 105 ಸ್ಥಾನಗಳನ್ನು ಹೊಂದಿರುವವರು ಈ ಹಿಂದೆ ಸರ್ಕಾರ ರಚಿಸಲು ಬಹುಮತವಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದರು. ಆದರೆ ಈಗ ಅವರು ಮಾತ್ರ ಸರ್ಕಾರ ರಚಿಸುವುದಾಗಿ ಹೇಗೆ ಹೇಳಿಕೊಳ್ಳುತ್ತಿದ್ದಾರೆ? ಈ ಮೂಲಕ ಕುದುರೆ ವ್ಯಾಪಾರದ ನಿಲುವನ್ನು ಬಹಿರಂಗಪಡಿಸಿದ್ದಾರೆ. ಪಾರದರ್ಶಕ ಆಡಳಿತದ ಭರವಸೆ ನೀಡುವವರ ಸುಳ್ಳುಗಳು ಈಗ ತಿಳಿಯುತ್ತಿದೆ. "ಅನೈತಿಕ" ಮಾರ್ಗಗಳು ಈ ರಾಜ್ಯದ ಸಂಪ್ರದಾಯಕ್ಕೆ ಸರಿಹೊಂದುವುದಿಲ್ಲ ಎಂದು ತಿಳಿಸಿದೆ.

ಯಾವುದೇ ಪಕ್ಷ ಅಥವಾ ಮೈತ್ರಿಯು ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡದಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಮತ್ತು ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿದ್ದರು. ಹೀಗಾಗಿ ನವೆಂಬರ್ 12ರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.