ಮುಂಬೈ: ’ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂವಿಧಾನ ಬದಲಿಸುವ ಧೈರ್ಯವಿಲ್ಲ. ಹಾಗಾಗಿ ಭಯಪಡುವ ಅಗತ್ಯವಿಲ್ಲ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂಬೈನ ಕಾಂಗ್ರೆಸ್ ಹುಟ್ಟಿದ ಸ್ಥಳದಲ್ಲಿ ಹತ್ತು ಸಾವಿರ ಕಿಲೋ ಮೀಟರ್‌ಗೂ ಹೆಚ್ಚಿನ ದೂರದ, ಎರಡು ಹಂತದ ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಸಮಾರೋಪದಲ್ಲಿ ಭಾನುವಾರ ಅವರು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರ ನಡೆದಿದ್ದ ಚೈತ್ಯಭೂಮಿಗೆ ಶನಿವಾರ ಭೇಟಿ ನೀಡಿ ಸಂವಿಧಾನದ ಪೀಠಿಕೆ ಓದುವ ಮೂಲಕ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಅಂತ್ಯಗೊಳಿಸಿದ್ದರು.
ಸಮಾರೋಪ ಕಾರ್ಯಕ್ರಮವು ಗೋಕುಲ್‌ದಾಸ್ ತೇಜ್‌ಪಾಲ್ ಸಭಾಂಗಣದಲ್ಲಿ (ಹಿಂದಿನ ಗೋಕುಲ್‌ದಾಸ್ ತೇಜ್‌ಪಾಲ್ ಸಂಸ್ಕೃತ ಕಾಲೇಜ್) ನಡೆಯಿತು. 1985ರ ಡಿಸೆಂಬರ್ 28ರಂದು ಪತ್ರಕರ್ತರು, ವಕೀಲರು, ಸಮಾಜ ಸುಧಾರಕರು ಸೇರಿದಂತೆ 72 ಮಂದಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕಾಗಿ ಸೇರುವ ಮೂಲಕ ಇದೇ ಸ್ಥಳದಲ್ಲಿ ಕಾಂಗ್ರೆಸ್ ಪಕ್ಷ ಜನ್ಮ ತಾಳಿತ್ತು.
ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಜೊತೆಗೂಡಿದ ರಾಹುಲ್ ಗಾಂಧಿ, ‘ಪ್ರೀತಿ ಮತ್ತು ಗೌರವ ಭಾರತದ ಡಿಎನ್‌ಎನಲ್ಲಿಯೇ ಇವೆ. ಎರಡು ಹಂತದ ಯಾತ್ರೆಯಲ್ಲಿ ನಾನು ಕಂಡಿದ್ದು ಇದನ್ನೇ’ ಎಂದು ಹೇಳಿದರು.
‘ಸ್ವಾತಂತ್ರ್ಯಕ್ಕಾಗಿ ಪ್ರೀತಿಯಿಂದ ಹೋರಾಡಿದ ದೇಶ ಭಾರತ ಒಂದೇ. ಗಾಂಧೀಜಿ ಮತ್ತು ಭಾರತ ನಮಗೆ ಸ್ವಾತಂತ್ರ್ಯದ ಮಾರ್ಗವನ್ನು ತೋರಿದವು ಎಂದು ನಾನು ದಕ್ಷಿಣ ಆಫ್ರಿಕಾಗೆ ಹೋದಾಗ ನೆಲ್ಸನ್ ಮಂಡೇಲಾ ಹೇಳಿದರು’ ಎಂದು ಅವರು ಸ್ಮರಿಸಿದರು.
‘ದೇಶದಲ್ಲಿ ಕೆಲವು ಕೋಟ್ಯಧಿಪತಿಗಳ ಸಾಲ ಮನ್ನಾ ಮಾಡಲಾಯಿತು. ಆದರೆ, ರೈತರ ಒಂದು ಪೈಸೆ ಸಾಲವನ್ನೂ ಮನ್ನಾ ಮಾಡಲಿಲ್ಲ. ಒಂದು ಕಡೆ ಕೆಲವೇ ಜನ ದೇಶದ ಎಲ್ಲ ಸಂಪತ್ತಿನ ಒಡೆಯರಾಗಿದ್ದಾರೆ. ಮತ್ತೊಂದು ಕಡೆ, ಯುವ ಜನತೆಗೆ, ರೈತರಿಗೆ, ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ’ ಎಂದು ಅವರು ಟೀಕಿಸಿದರು.
‘ನಮ್ಮ ಗ್ಯಾರಂಟಿ ಹಿಂದೂಸ್ಥಾನದ ಧ್ವನಿಯಾಗಿದ್ದು, ಸಾಮಾನ್ಯ ಜನರೊಂದಿಗೆ ಒಡನಾಡಿ ನಾವು ಅದನ್ನು ರೂಪಿಸಿದ್ದೇವೆ. ಬಿಜೆಪಿ ಎಂದಿಗೂ ಇದನ್ನು ಮಾಡಲು ಸಾಧ್ಯವಿಲ್ಲ. ಅಲ್ಲಿ ಎಲ್ಲವೂ ಮೇಲಿನಿಂದ ಬರುತ್ತವೆ’ ಎಂದು ಅವರು ಹೇಳಿದರು.
ಸಭೆಗೂ ಮುನ್ನ ರಾಹುಲ್ ಮತ್ತು ಪ್ರಿಯಾಂಕಾ ಮಹಾತ್ಮ ಗಾಂಧಿ ಅವರು ಅಸಹಕಾರ, ಸತ್ಯಾಗ್ರಹ, ಸ್ವದೇಶಿ ಚಳವಳಿ ಆರಂಭಿಸಿದ ಮಣಿಭವನಕ್ಕೆ ಭೇಟಿ ನೀಡಿದ್ದರು. ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಅವರ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.