ನವದೆಹಲಿ: ‘ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ 45 ಹುದ್ದೆಗಳಿಗೆ ಖಾಸಗಿ ವಲಯದಿಂದ ನೇರ ನೇಮಕಾತಿ (ಲ್ಯಾಟೆಲರ್ ಎಂಟ್ರಿ) ಮಾಡಿಕೊಳ್ಳುವ ಜಾಹೀರಾತನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಹುದ್ದೆಗಳಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಇಡಬ್ಲ್ಯುಎಸ್‌ಗೆ ಮೀಸಲಾತಿ ನೀಡಲಾಗುತ್ತದೆಯೇ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
‘ಬಿಜೆಪಿಯು ವ್ಯವಸ್ಥಿತ ಪಿತೂರಿ ನಡೆಸಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದ ಜನರನ್ನು ಮೀಸಲಾತಿಯಿಂದ ಹೊರಗಿಡಬೇಕು ಎನ್ನುವ ಉದ್ದೇಶದಿಂದಲೇ ಬಿಜೆಪಿ ಇಂಥ ನೇಮಕಾತಿ ನಡೆಸುತ್ತಿದೆ’ ಎಂದು ಆರೋಪಿಸಿದರು.
‘ಸಂವಿಧಾನವನ್ನು ಹರಿದು ಹಾಕಿದ ಬಿಜೆಪಿಯು ಈಗ ಮೀಸಲಾತಿಯ ಮೇಲೆ ಪ್ರಹಾರ ನಡೆಸುತ್ತಿದೆ. ಸಂವಿಧಾನದಲ್ಲಿರುವ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯವು ಜನರಿಗೆ ಒದಗುವಂತೆ ಮಾಡಬೇಕು. ಈ ಕಾರಣಕ್ಕಾಗಿಯೇ ಪಕ್ಷವು ಜಾತಿ ಗಣತಿ ನಡೆಸಿ ಎಂದು ಒತ್ತಾಯಿಸುತ್ತಿದೆ’ ಎಂದರು.
‘60 ಸಾವಿರ ಸಹಾಯಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿಕೊಳ್ಳುವಲ್ಲಿ ಉತ್ತರ ಪ್ರದೇಶದ ಸರ್ಕಾರವು ನಡೆಸಿದ ‘ಮೀಸಲಾತಿ ಹಗರಣ’ವನ್ನು ಹೈಕೋರ್ಟ್‌ನ ಹೊಸ ನೇಮಕಾತಿ ಆದೇಶವು ಬಹಿರಂಗಪಡಿಸಿದೆ’ ಎಂದು ಇದೇ ವೇಳೆ ಅವರು ಉಲ್ಲೇಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.