ADVERTISEMENT

ಜೈಪುರ: ಬಿಜೆಪಿ ಸೇರಿದ ಕಾಂಗ್ರೆಸ್‌ ಕೌನ್ಸಿಲರ್‌ಗಳ ಶುದ್ಧೀಕರಣ! ಗೋಮೂತ್ರ ಸಿಂಪಡಣೆ

ಮೇಯರ್‌ ಅಧಿಕಾರ ಸ್ವೀಕಾರಕ್ಕೂ ಮುನ್ನ ನಡೆದ ಕ್ರಿಯೆ * ಗಂಗಾಜಲ, ಗೋಮೂತ್ರ ಸಿಂಪಡಣೆ

ಪಿಟಿಐ
Published 27 ಸೆಪ್ಟೆಂಬರ್ 2024, 14:48 IST
Last Updated 27 ಸೆಪ್ಟೆಂಬರ್ 2024, 14:48 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜೈಪುರ: ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ ಕೌನ್ಸಿಲರ್‌ಗಳು ಮತ್ತು ಮಹಾನಗರ ಪಾಲಿಕೆಯನ್ನು ಶುದ್ಧೀಕರಿಸುವ ಕ್ರಿಯೆಯನ್ನು ಇಲ್ಲಿನ ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಶುಕ್ರವಾರ ನೆರವೇರಿಸಿದರು.

ಹಥೋಜ್‌ ಧಾಮ್ ದೇಗುಲದ ಅರ್ಚಕರೂ ಆಗಿರುವ ಆಚಾರ್ಯ, ಜೈಪುರ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಕೌನ್ಸಿಲರ್‌ಗಳ ಮೇಲೆ ‘ಗಂಗಾಜಲ’ ಮತ್ತು ‘ಗೋಮೂತ್ರ’ ಸಿಂಪಡಿಸಿ ಶುದ್ಧೀಕರಣ ಕಾರ್ಯ ನಡೆಸಿದರು. ಈ ಮೂಲಕ ಭ್ರಷ್ಟಾಚಾರದಿಂದ ಪಾಲಿಕೆಯನ್ನು ಶುದ್ಧೀಕರಿಸುವ ಕಾರ್ಯ ಸಂಪನ್ನವಾಗಿದೆ ಎಂದು ಅವರು ತಿಳಿಸಿದರು. 

ADVERTISEMENT

ಭ್ರಷ್ಟಾಚಾರದ ಆರೋಪದ ಕಾರಣ ಮೇಯರ್‌ ಮುನೇಶ್‌ ಗುರ್ಜಾರ್‌ ಅವರನ್ನು ಪದಚ್ಯುತಗೊಳಿಸಿದ ಬಳಿಕ, ಕಾಂಗ್ರೆಸ್‌ನ ಏಳು ಕೌನ್ಸಿಲರ್‌ಗಳು ಮತ್ತು ಒಬ್ಬ ಪಕ್ಷೇತರರ ಬೆಂಬಲದಿಂದ ಕುಸುಮ್‌ ಯಾದವ್‌ ಅವರನ್ನು ಮೇಯರ್‌ ಆಗಿ ಬಿಜೆಪಿ ಆಯ್ಕೆ ಮಾಡಿದೆ. ಅಲ್ಲದೆ ಈ ಎಲ್ಲ ಎಂಟು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕುಸುಮ್‌ ಅವರು ಅಧಿಕಾರ ಸ್ವೀಕರಿಸುವ ಮುನ್ನ, ಶಾಸಕ ಆಚಾರ್ಯ ಅವರು ಕೌನ್ಸಿಲರ್‌ಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಶುದ್ಧೀಕರಣ ಕಾರ್ಯ ನಡೆಸಿದರು.

‘ನಾವು ಗಂಗಾಜಲದಿಂದ ಕಚೇರಿಯನ್ನು ಶುದ್ಧಗೊಳಿಸಿದ್ದೇವೆ. ಈಗ ಇಲ್ಲಿನ ಸಕಲ ಕಲ್ಮಶಗಳನ್ನು ತೊಲಗಿಸಲಾಗಿದೆ. ಈಗ ಅಧಿಕಾರವಹಿಸಿಕೊಂಡ ಮೇಯರ್‌ ಅವರು ಶುದ್ಧ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ’ ಎಂದು ಆಚಾರ್ಯ ಪ್ರತಿಕ್ರಿಯಿಸಿದರು.

‘ಹಿಂದೂ ಸಂಸ್ಕೃತಿಯಲ್ಲಿ ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸುವ ಮೂಲಕ ಶುದ್ಧೀಕರಣ ಕ್ರಿಯೆ ನಡೆಸುವುದು ಸಹಜ’ ಎಂದು ಕೌನ್ಸಿಲರ್‌ ಮನೋಜ್‌ ಮುದ್ಗಲ್‌ ತಿಳಿಸಿದರು.

ಕಾಂಗ್ರೆಸ್ ಟೀಕೆ: ಶುದ್ಧೀಕರಣ ಕಾರ್ಯದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವರ್ಣಿಂ ಚತುರ್ವೇದಿ, ‘ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವವರೆಲ್ಲ ತಮ್ಮ ಪಾಪಗಳಿಂದ ಮುಕ್ತಿ ಪಡೆಯುವುದು ವಿಚಿತ್ರವಾಗಿದೆ’ ಎಂದು ಟೀಕಿಸಿದರು.

ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ಮೊದಲಿಗೆ ಕಾಂಗ್ರೆಸ್‌ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾರೆ. ಬಳಿಕ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಬೆದರಿಸುತ್ತಾರೆ. ಆ ನಾಯಕರು ಬಿಜೆಪಿ ಸೇರಿದ ಕೂಡಲೇ ಅಪರಾಧಗಳಿಂದ ಮುಕ್ತರಾಗುತ್ತಾರೆ’ ಎಂದು ಚತುರ್ವೇದಿ ಅಸಮಾಧಾನ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.