ADVERTISEMENT

ಜಾಹೀರಾತು: ಸುಪ್ರೀಂ ಕೋರ್ಟ್‌ ಮೊರೆ ಹೋದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 24 ಮೇ 2024, 14:10 IST
Last Updated 24 ಮೇ 2024, 14:10 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಲೋಕಸಭಾ ಚುನಾವಣೆಯ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಯಾವುದೇ ಜಾಹೀರಾತು ಪ್ರಕಟಿಸದಂತೆ ಏಕಸದಸ್ಯ ಪೀಠವು ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 

ಬೇಲಾ ಎಂ. ತ್ರಿವೇದಿ ಮತ್ತು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರ ರಜಾಕಾಲದ ಪೀಠದ ಮುಂದೆ ಈ ವಿಚಾರವನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಲಾಗಿದೆ. ಅರ್ಜಿಯನ್ನು ಸೋಮವಾರ ವಿಚಾರಣೆಗೆ ಪರಿಗಣಿಸುವಂತೆ ವಕೀಲ ಸೌರಭ್ ಮಿಶ್ರಾ ಮನವಿ ಮಾಡಿದರು. ಅದರ ಬಗ್ಗೆ ಪರಿಶೀಲಿಸುವುದಾಗಿ ಪೀಠವು ತಿಳಿಸಿದೆ.

ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠವು ಬಿಜೆಪಿಯ ವಾದವನ್ನು ಆಲಿಸದೇ ಆದೇಶವನ್ನು ನೀಡಿದ್ದಾಗಿ ಪಕ್ಷದ ಪರ ವಕೀಲರು ವಿಭಾಗೀಯ ಪೀಠದ ಮುಂದೆ ಪ್ರಸ್ತಾಪಿಸಿದ್ದರು. ಈ ಬಗ್ಗೆ ನಿರ್ಧರಿಸಲು ಚುನಾವಣಾ ಆಯೋಗವು ಸೂಕ್ತ ವೇದಿಕೆಯಾಗಿದೆ ಎಂದು ವಾದಿಸಿದ್ದರು.

ADVERTISEMENT

ಮೇ 22ರಂದು ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಯಾವುದೇ ರಾಜಕೀಯ ಪಕ್ಷದ ಮೇಲೆ ವೈಯಕ್ತಿಕ ದಾಳಿ ಸಲ್ಲದು ಎಂದು ಅಭಿಪ್ರಾಯಪಟ್ಟಿದ್ದ ವಿಭಾಗೀಯ ಪೀಠವು, ‘ಲಕ್ಷ್ಮಣ ರೇಖೆ’ಯನ್ನು ದಾಟಬಾರದು ಎಂದು ತಿಳಿಸಿತ್ತು.

ಬಿಜೆಪಿಯು ಜೂನ್ 4ರವರೆಗೆ ನೀತಿ ಸಂಹಿತೆ ಉಲ್ಲಂಘಿಸಿ ಯಾವುದೇ ಜಾಹೀರಾತು ಪ್ರಕಟಿಸದಂತೆ ಹೈಕೋರ್ಟ್ ಮೇ 20ರಂದು ತಡೆಯಾಜ್ಞೆ ನೀಡಿತ್ತು.

ತಮ್ಮ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರ ವಿರುದ್ಧ ಅಸಮರ್ಥನೀಯ ಆರೋಪಗಳನ್ನು ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೋರ್ಟ್ ಮೆಟ್ಟಿಲೇರಿತ್ತು. ಅಂಥ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಗೆ ಕೋರ್ಟ್ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.