ನವದೆಹಲಿ: ‘ಗೋವುಗಳ ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿ ದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ’ ಎಂದು ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ.
ಮನೇಕಾ ಅವರ ಈ ಆರೋಪವನ್ನು ಇಸ್ಕಾನ್ ತಳ್ಳಿ ಹಾಕಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಗೋ ಸಂರಕ್ಷಣೆಯಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ ಎಂದಿದೆ.
ಇಸ್ಕಾನ್ ವಿರುದ್ಧ ಮನೇಕಾ ಗಾಂಧಿ ಅವರು ನೇರ ವಾಗ್ದಾಳಿ ನಡೆಸಿದ ವಿಡಿಯೊವನ್ನು ‘ದಿ ತತ್ವ‘ ತನ್ನ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದೆ. ‘ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ನೀಡುವ ಹಸುಗಳಾಗಲೀ ಅಥವಾ ಕರುಗಳಾಗಲಿ ಇರಲಿಲ್ಲ. ಇದ್ದ ಹಸು ಹಾಗೂ ಕರುಗಳನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಅಲ್ಲಿದ್ದ ಎಲ್ಲಾ ಹಸು, ಕರುಗಳನ್ನು ಕಸಾಯಿಖಾನೆಗೆ ಇಸ್ಕಾನ್ ಮಾರಾಟ ಮಾಡಿತ್ತು. ಇವರು ಹೀಗೆ ಮಾಡಿದಷ್ಟು ಬೇರೆ ಯಾರೂ ಈವರೆಗೂ ಮಾಡಿಲ್ಲ ಎಂದು ಮನೇಕಾ ಆರೋಪಿಸಿದ್ದಾರೆ.
ರಸ್ತೆಯಲ್ಲಿ ಹರೇ ರಾಮ ಹರೇ ಕೃಷ್ಣ ಎಂದು ಹಾಡುತ್ತಾರೆ. ತಮ್ಮ ಬದುಕೇ ಹಸುಗಳ ಹಾಲಿನ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ. ಆದರೆ ಕಸಾಯಿಖಾನೆಗೆ ಇವರಷ್ಟು ಹಸುಗಳನ್ನು ಯಾರೂ ಮಾರಾಟ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೇಕಾ ಗಾಂಧಿ ಅವರ ಈ ಆರೋಪ ಸುಳ್ಳು ಹಾಗೂ ಆಧಾರ ರಹಿತವಾಗಿದೆ. ಕೇಂದ್ರದ ಮಾಜಿ ಸಚಿವರ ಇಂಥ ಹೇಳಿಕೆ ಅಚ್ಚರಿ ಮೂಡಿಸಿದೆ. ಎಲ್ಲಿ ದನದ ಮಾಂಸವೇ ಪ್ರಮುಖ ಆಹಾರವಾಗಿದೆಯೋ ಜಗತ್ತಿನ ಅಂತಹ ಭಾಗಗಳಲ್ಲಿ ಗೋ ಸಂರಕ್ಷಣಾ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ. ಅನಾಥವಾಗಿರುವ, ಗಾಯಗೊಂಡಿರುವ ಹಾಗೂ ರಕ್ಷಿಸಲಾದ ಗೋವುಗಳನ್ನು ಇಸ್ಕಾನ್‌ನ ಗೋ ಶಾಲೆಗೆ ಸೇರಿಸುವ ಪದ್ಧತಿ ಈಗಲೂ ಇದೆ ಎಂದು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುದಿಷ್ಟಿರ ಗೋವಿಂದ ದಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.