ನವದೆಹಲಿ: ‘ಕೆಲ ಎಡ– ಉದಾರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸಲಿಂಗ ವಿವಾಹದ ಕಾನೂನು ಮಾನ್ಯತೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂಥ ಪ್ರಯತ್ನವನ್ನು ಸರ್ಕಾರ ತೀವ್ರವಾಗಿ ವಿರೋಧಿಸಬೇಕು’ ಎಂದುಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಸೋಮವಾರ ಹೇಳಿದ್ದಾರೆ.
ಸಂಸತ್ತಿನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ದೇಶದ ಸಂಸ್ಕೃತಿಗೆ ಧಕ್ಕೆ ತರುವಂಥ ಇಂಥ ನೀತಿಯ ಪರವಾಗಿ ನ್ಯಾಯಾಂಗವು ಯಾವುದೇ ತೀರ್ಪು ನೀಡಬಾರದು ಎಂದೂ ಒತ್ತಾಯಿಸಿದ್ದಾರೆ.
‘ಭಾರತದಲ್ಲಿ, ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ಕ್ರೋಡೀಕರಿಸದ ವೈಯಕ್ತಿಕ ಕಾನೂನಿನಲ್ಲಿ ಸಲಿಂಗ ವಿವಾಹವನ್ನು ಗುರುತಿಸಲಾಗುವುದಿಲ್ಲ ಅಥವಾ ಅಂಗೀಕರಿಸಲಾಗುವುದಿಲ್ಲ. ಸಲಿಂಗ ವಿವಾಹವು ದೇಶದಲ್ಲಿ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನಕ್ಕೆ ಹಾನಿಯುಂಟು ಮಾಡುತ್ತದೆ.ಇಂತಹ ಮಹತ್ವದ ಸಾಮಾಜಿಕ ವಿಷಯದ ಬಗ್ಗೆ ಇಬ್ಬರು ನ್ಯಾಯಮೂರ್ತಿಗಳು ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ಪಟ್ಟ ಸುಶೀಲ್ ಕುಮಾರ್, ಈ ವಿಷಯವು ಸಂಸತ್ತು ಮತ್ತು ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಒಳಪಡಬೇಕಿದೆ ಎಂದರು.
ಸರ್ಕಾರವು, ನ್ಯಾಯಾಲಯದಲ್ಲಿ ಇಂಥ ಪ್ರಕರಣಗಳ ವಿರುದ್ಧ ತೀವ್ರವಾಗಿ ವಾದ ಮಂಡಿಸಬೇಕು ಎಂದೂ ಅವರು ಒತ್ತಾಯಿಸಿದರು.
ಇದೇ ವೇಳೆ ವೈಎಸ್‌ಆರ್‌ಸಿಪಿ ಸದಸ್ಯ ವಿಜಯ್ ಸಾಯಿ ರೆಡ್ಡಿ ಅವರು, ವಿಶಾಖಪಟ್ಟಣಂನಲ್ಲಿ ಡ್ರೋನ್ ಸಂಶೋಧನಾ ಸಂಸ್ಥೆ ಸ್ಥಾಪಿಸುವಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.