ನವದೆಹಲಿ: ಸಂಸದರು ತಮ್ಮ ವಿದೇಶ ಪ್ರವಾಸಗಳವಿವರವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲು ಕಾನೂನು ರೂಪಿಸುವ ಅಗತ್ಯವಿದೆ. ಈ ವಿವರವು ಪ್ರವಾಸಕ್ಕೆ ಬೇಕಾಗುವ ಹಣದ ಮೂಲ ಮತ್ತು ಖರ್ಚು–ವೆಚ್ಚಗಳನ್ನು ಒಳಗೊಂಡಿರಬೇಕು ಎಂದು ಬಿಜೆಪಿ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ರಹಸ್ಯ’ ವಿದೇಶ ಪ್ರವಾಸಗಳ ಬಗ್ಗೆ ಬಿಜೆಪಿ ಆಗಾಗ್ಗೆ ಟೀಕಿಸುತ್ತ ಬಂದಿದೆ. ಇದನ್ನಿಟ್ಟುಕೊಂಡೇ ಬಿಜೆಪಿ ಸಂಸದ ಜಿ.ವಿ.ಎಲ್.ನರಸಿಂಹ ರಾವ್ ಅವರು ರಾಜ್ಯಸಭೆಯಲ್ಲಿ ಜನ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆಯನ್ನು ಸದಸ್ಯರ ಖಾಸಗಿ ಮಸೂದೆಯಾಗಿ ಮಂಡಿಸಿದರು.
ಸಂಸದರು ಜನರ ಪ್ರತಿನಿಧಿಗಳಾಗಿರುವುದರಿಂದ ಅವರ ವಿದೇಶ ಪ್ರವಾಸಗಳ ಮಾಹಿತಿಯನ್ನು ಬಹಿರಂಗಪಡಿಸಲೇಬೇಕು. ತಮ್ಮ ಸ್ವಂತ ಖರ್ಚಿನಲ್ಲಿಯೇ ಪ್ರವಾಸ ಕೈಗೊಂಡಿದ್ದರೂ ವಿವರವನ್ನು ಬಹಿರಂಗಗೊಳಿಸಲೇಬೇಕು ಎಂದು ಅವರು ಹೇಳಿದ್ದಾರೆ.
ಬೇರೆ ರಾಷ್ಟ್ರಗಳ ಸರ್ಕಾರ ಅಥವಾ ಸಂಸ್ಥೆಗಳಿಂದ ಆತಿಥ್ಯ ಪಡೆದರೂ ರಾಜ್ಯಸಭೆಯ ಸಭಾಪತಿಗೆ ಅಥವಾ ಲೋಕಸಭೆಯ ಸ್ಪೀಕರ್‌ಗೆ ವಿವರ ನೀಡಬೇಕು. ಏಕೆಂದರೆ, ವಿದೇಶಿ ಕೊಡುಗೆಯ (ನಿಯಂತ್ರಣ) ಕಾಯ್ದೆ ಸೆಕ್ಷನ್ 9ರ ಪ್ರಕಾರ ಕೇಂದ್ರದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಸದಸ್ಯರ ಖಾಸಗಿ ಮಸೂದೆಗಳ ಅಂಗೀಕಾರವಾಗುವುದು ವಿರಳ. ಆದರೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಸದಸ್ಯರಿಗೆ ಈ ಮಸೂದೆ ಅವಕಾಶ ನೀಡಿತು. ರಾಹುಲ್ ಅವರ ರಹಸ್ಯ ವಿದೇಶ ಪ್ರವಾಸಗಳ ಬಗ್ಗೆ ಚರ್ಚೆಗೆ ಗ್ರಾಸ ಒದಗಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.