ADVERTISEMENT

ಬಿಜೆಪಿ ಸಂಸದರ ಆರೋಪ ಆಧಾರಹಿತ: ಡ್ಯಾನಿಶ್‌ ಅಲಿ

ಸಂಸತ್ ಹೊರಗೂ ನನ್ನ ಮೇಲೆ ದಾಳಿ ನಡೆಸಲು ಸಂಚು: ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 16:15 IST
Last Updated 24 ಸೆಪ್ಟೆಂಬರ್ 2023, 16:15 IST
ಡ್ಯಾನಿಷ್ ಅಲಿ
ಡ್ಯಾನಿಷ್ ಅಲಿ   

ನವದೆಹಲಿ (ಪಿಟಿಐ): ‘ಬಿಜೆಪಿ ಸಂಸದರು ನನ್ನ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು, ಇದರ ಬಗ್ಗೆಯೂ ತನಿಖೆ ನಡೆಸುವಂತೆ ಸ್ಪೀಕರ್‌ಗೆ ಮನವಿ ಮಾಡುತ್ತೇನೆ’ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಹೇಳಿದ್ದಾರೆ. 

ಸಂಸದ ನಿಶಿಕಾಂತ್ ದುಬೆ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಲಿ, ‘ನನ್ನ ವಿರುದ್ಧದ ಆಧಾರರಹಿತ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸ್ಪೀಕರ್‌ಗೆ ಮನವಿ ಮಾಡುತ್ತೇನೆ. ಈ ಆಧಾರರಹಿತ ಆರೋಪವು ನಿಶಿಕಾಂತ್ ದುಬೆ ವಿರುದ್ಧ ಹಕ್ಕುಚ್ಯುತಿ ಪ್ರಕರಣ ದಾಖಲಿಸುತ್ತದೆ. ಘಟನೆಗಳನ್ನು ಕಾಲ್ಪನಿಕಗೊಳಿಸುವುದು ಮತ್ತು ಸತ್ಯದೊಂದಿಗೆ ಆಟವಾಡುವುದು ಈ ಬಾರಿ ಕೆಲಸ ಮಾಡುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. 

‘ಬಿಜೆಪಿ ಸಂಸದ ರಮೇಶ್ ಬಿಧೂಡಿ ಅವರನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಿದ್ದ ಬಿಜೆಪಿಯ ಮತ್ತೊಬ್ಬ ಸಂಸದ ನಿಶಿಕಾಂತ್ ದುಬೆ ವಿರುದ್ಧ ನಾನು ವಾಗ್ದಾಳಿ ನಡೆಸಿದ್ದೆ. ಈ ಕಾರಣಕ್ಕಾಗಿ, ಸಂಸತ್‌ನಲ್ಲಿ ನನ್ನ ಮೇಲೆ ನಿಂದನೀಯ ‍ಪದ ಬಳಸಿ ವಾಗ್ದಾಳಿ ಮಾಡಿದಲ್ಲದೆ,  ಈಗ ಸಂಸತ್ ಹೊರಗೂ ನನ್ನ ಮೇಲೆ ದಾಳಿ ನಡೆಸುವ ವ್ಯವಸ್ಥಿತ ಸಂಚು ನಡೆದಿದೆ’ ಎಂದು ಅಲಿ ಆರೋಪಿಸಿದ್ದಾರೆ. 

ADVERTISEMENT

ಸದನದಲ್ಲಿ ಅಲಿ ಅವರ ವರ್ತನೆ ಮತ್ತು ಹೇಳಿಕೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಸಂಸದ ನಿಶಿಕಾಂತ್ ದುಬೆ ಶನಿವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. 

ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿ ಸದಸ್ಯರು ಬಿಧುಢಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಸಂಸತ್‌ನಲ್ಲಿ ಇರಬಾರದು: ಡ್ಯಾನಿಶ್‌ ಅಲಿ ಬಗ್ಗೆ ರಮೇಶ್‌ ಬಿಧೂಡಿ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವುತ್‌ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

‘ಒಬ್ಬ ಲೋಕಸಭಾ ಸದಸ್ಯ ಇನ್ನೊಬ್ಬ ಸಂಸದನನ್ನು ಭಯೋತ್ಪಾದಕ ಮತ್ತು ಉಗ್ರಗಾಮಿ ಎಂದು ಕರೆಯುತ್ತಾನೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಧರ್ಮ ಮತ್ತು ಜಾತಿ ಬಗ್ಗೆ ಟೀಕೆಗಳನ್ನು ಮಾಡುತ್ತಾರೆ. ಯಾವುದೇ ವಿರೋಧ ಪಕ್ಷದ ಸಂಸದರು ಇಂತಹ ಕೆಟ್ಟ ಭಾಷೆ ಬಳಸಿದ್ದರೆ, ನನ್ನ ನಿಲುವು ಒಂದೇ ಆಗಿರುತ್ತಿತ್ತು’ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.  

‘ಇದು ತಪ್ಪು ಮತ್ತು ಅಂತಹ ವ್ಯಕ್ತಿ ಸಂಸತ್ತಿನಲ್ಲಿ ಇರಬಾರದು. ಹೊಸ ಸಂಸತ್ತಿನ ಪಾವಿತ್ರ್ಯತೆ ಮತ್ತು ಗೌರವ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದ್ದಾರೆ. 

ಈ ಘಟನೆ ಬಳಿಕ ಬಿಧೂಢಿ ಮತ್ತು ಅಲಿ ಕ್ರಮವಾಗಿ ಬಿಜೆಪಿ ಮತ್ತು ಪ್ರತಿಪಕ್ಷಗಳ ‘ಪೋಸ್ಟರ್ ಬಾಯ್ಸ್’ ಆಗಿದ್ದಾರೆ ಎಂಬ ಮಾತನ್ನು ರಾವತ್ ತಳ್ಳಿಹಾಕಿದರು.

‘ಸಂಸತ್ತಿನ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು. ಎಎಪಿ ಸಂಸದರಾದ ರಾಘವ ಛಡ್ಡಾ , ಸಂಜಯ್‌ ಸಿಂಗ್, ರಜನಿ ಪಟೇಲ್‌ ಮತ್ತು ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತು ಮಾಡಿ, ಬಿಧೂಢಿಗೆ ಮಾತ್ರ ನೋಟಿಸ್‌ ಕಳುಹಿಸಿರುವುದು ಸರಿಯೇ’ ಎಂದು ರಾವುತ್‌ ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.