ADVERTISEMENT

ಸನ್ನಿ ಡಿಯೋಲ್‌ ಮೇಲೆ ಐಟಿ ಒತ್ತಡ: ಅಮರಿಂದರ್‌

​ಪ್ರಜಾವಾಣಿ ವಾರ್ತೆ
Published 12 ಮೇ 2019, 6:19 IST
Last Updated 12 ಮೇ 2019, 6:19 IST
ಅಮರಿಂದರ್‌ ಸಿಂಗ್‌
ಅಮರಿಂದರ್‌ ಸಿಂಗ್‌   

ಭಾವ್‌ (ಪಠಾಣ್‌ಕೋಟ್‌): ‘ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸದಿದ್ದರೆ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಸುವುದಾಗಿ ನಟ ಸನ್ನಿ ಡಿಯೋಲ್‌ ಅವರಿಗೆ ಬಿಜೆಪಿಯವರು ಒತ್ತಡ ಹೇರಿರಬೇಕು’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಖಾರ್‌ ಪರ ಚುನಾವಣಾ ರ್‍ಯಾಲಿಯೊಂದರಲ್ಲಿ ಸನ್ನಿ ಡಿಯೋಲ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅಮರಿಂದರ್‌, ‘ಗುರುದಾಸ್‌ಪುರ ಕ್ಷೇತ್ರಕ್ಕೂ ಸನ್ನಿ ಡಿಯೋಲ್‌ಗೂ ಯಾವುದೇ ಸಂಬಂಧವಿಲ್ಲ. ಚುನಾವಣೆಯ ಬಳಿಕ ಅವರು ಮುಂಬೈಗೆ ಓಡಿಹೋಗುತ್ತಾರೆ ಎಂದರು.

‘ಜನರಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಏನನ್ನೂ ತಿಳಿದುಕೊಳ್ಳದ ವ್ಯಕ್ತಿ, ಜನರ ಸೇವೆ ಮಾಡಲು ಹೇಗೆ ಸಾಧ್ಯ? ಚುನಾವಣೆ ಎಂಬುದು ಹಾಸ್ಯವಲ್ಲ. ಸಂಸದರಾದವರು ಸಂಸತ್ತಿನಲ್ಲಿ ಜನರ ಪರವಾಗಿ ಮಾತನಾಡಬೇಕು. ಅವರು (ಸನ್ನಿ ಡಿಯೋಲ್‌) ಇಲ್ಲಿಂದ ಸ್ಪರ್ಧಿಸಲು ಬಿಜೆಪಿಯವರು ಹೇರಿದ ಒತ್ತಡವೇ ಕಾರಣ.ಸನ್ನಿ ಡಿಯೋಲ್‌ ಬ್ಯಾಂಕ್‌ಗಳಿಗೆ ಹಲವು ಕೋಟಿ ರೂಪಾಯಿ ಸಾಲ ಉಳಿಸಿಕೊಂಡಿದ್ದಾರೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೆ. ತಮ್ಮ ಪಕ್ಷದಿಂದ ಸ್ಪರ್ಧಿಸದಿದ್ದರೆ ಆದಾಯ ತೆರಿಗೆ ದಾಳಿ ನಡೆಸುವುದಾಗಿ ಬಿಜೆಪಿಯವರು ಸನ್ನಿ ಮೇಲೆ ಒತ್ತಡ ಹೇರಿರಬೇಕು. ರಾಜಕೀಯ ಎದುರಾಳಿಗಳ ಮೇಲೆ ಇಂಥ ಒತ್ತಡ ಹೇರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಅಮರಿಂದರ್‌ ಆರೋಪಿಸಿದರು.

ADVERTISEMENT

ಸನ್ನಿ ಡಿಯೋಲ್‌ ಅವರ ಸಾಮಾನ್ಯ ಜ್ಞಾನದ ಬಗ್ಗೆ ಟೀಕೆ ಮಾಡುತ್ತಾ, ‘ಅವರು (ಡಿಯೋಲ್‌) ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಟಿ.ವಿ. ಸಂದರ್ಶನವೊಂದರಲ್ಲಿ ಸನ್ನಿ ಅವರಿಗೆ, ‘ಬಾಲಾಕೋಟ್‌ ವಾಯು ದಾಳಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಕೇಳಲಾಗಿತ್ತು. ಅದಕ್ಕೆ ‘ಬಾಲಾಕೋಟ್‌ ಎಂದರೇನು’ ಎಂದು ಸನ್ನಿ ಮರು ಪ್ರಶ್ನಿಸಿದ್ದರು. ಇಂಥ ಸಂಸದರು ನಮಗೆ ಬೇಕೇ? ದೇಶದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಿರದ ವ್ಯಕ್ತಿಯೊಬ್ಬ ರಾಜಕೀಯ ಪ್ರವೇಶಿಸಿ ಏನು ಮಾಡಬಲ್ಲ’ ಎಂದು ಪ್ರಶ್ನಿಸಿದರು.

‘ನೀವು ಮುಂಬೈ ನಿವಾಸಿ, ನಿಮ್ಮ ತೋಟ, ಮನೆ, ವ್ಯಾಪಾರ ಎಲ್ಲವೂ ಮುಂಬೈಯಲ್ಲಿದೆ. ಹೀಗಿರುವಾಗ ಗುರುದಾಸ್‌ಪುರಕ್ಕಾಗಿ ಏಕೆ ಅಷ್ಟೊಂದು ಕಷ್ಟಪಡುತ್ತೀರಿ? ಇಲ್ಲಿ ಬಂದು ಏನು ಮಾಡಬೇಕೆಂದು ಬಯಸುತ್ತೀರಿ? ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.