ಹೈದರಾಬಾದ್: ಸೇನಾ ನೇಮಕಾತಿ ಯೋಜನೆ ಅಗ್ನಿಪಥ ಮತ್ತು ಮುಂದಿನ 18 ತಿಂಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಕೇಂದ್ರ ಸರ್ಕಾರದ ಘೋಷಣೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶನಿವಾರ ಶ್ಲಾಘಿಸಲಾಗಿದೆ.
‘ಆರ್ಥಿಕತೆ ಮತ್ತು ಬಡವರ ಕಲ್ಯಾಣ ಸಂಕಲ್ಪ’ದ ನಿರ್ಣಯವನ್ನು ಅಂಗೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವು ಜಗತ್ತಿಗೇ ಮಾದರಿ ಎಂದು ಕೊಂಡಾಡಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಮಾತನಾಡಿದ ಅವರು, ಉದ್ಯೋಗ ಬಿಕ್ಕಟ್ಟಿನ ಕುರಿತ ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದರು. ‘ಕಳೆದ ಬಜೆಟ್‌ನಲ್ಲಿ ಸಾರ್ವಜನಿಕ ವೆಚ್ಚಕ್ಕಾಗಿ ಅತಿ ಹೆಚ್ಚು ಹಂಚಿಕೆ ಮಾಡಲಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸರ್ಕಾರವು ಅತಿ ಹೆಚ್ಚು ಬಂಡವಾಳ ವೆಚ್ಚವನ್ನು ಮಾಡಿದೆ. ಇದೆಲ್ಲವೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ್ದಾಗಿವೆ’ ಎಂದು ಸ್ಪಷ್ಟಪಡಿಸಿದರು.
‘ತೀವ್ರ ಬಿಕ್ಕಟ್ಟು ಇದ್ದಿದ್ದರೆ ಸಾಮಾಜಿಕ ಸಾಮರಸ್ಯಕ್ಕೆ ಪೆಟ್ಟು ಬೀಳುತ್ತಿತ್ತು’ ಎಂದ ಅವರು, ‘ಸರ್ಕಾರ ಉದ್ಯೋಗ ಸೃಷ್ಟಿಸಿ ಬಡವರ ರಕ್ಷಣೆ ಮಾಡಿದೆ’ ಎಂದು ಪ್ರತಿಪಾದಿಸಿದರು.
ಬಡವರ ಕಲ್ಯಾಣವೇ ಸರ್ಕಾರದ ಮುಖ್ಯ ಸಾಧನೆಯಾಗಿದೆ ಎಂದೂ ಪ್ರಧಾನ್ ಹೇಳಿದರು.
ಹಣದುಬ್ಬರ ಮತ್ತು ಡಾಲರ್ ಎದುರು ರೂಪಾಯಿಮೌಲ್ಯ ನಿರಂತರವಾಗಿ ದುರ್ಬಲಗೊಳ್ಳುತ್ತಿರುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನ್, ‘ಬಿಕ್ಕಟ್ಟು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಹಲವು ರಾಷ್ಟ್ರಗಳು ಹಣದುಬ್ಬರ ಎದುರಿಸುತ್ತಿವೆ. ಕೋವಿಡ್ ಇಡೀ ಜಗತ್ತನ್ನೇ ಸಂಕಷ್ಟಕ್ಕೆ ದೂಡಿದೆ. ಉಕ್ರೇನ್ ಯುದ್ಧದ ಕಾರಣದಿಂದ ಜಾಗತಿಕವಾಗಿ ಸರಕುಗಳ ಬೆಲೆ ಗಗನಮುಖಿಯಾಗಿದೆ. ಇದರಿಂದ ಭಾರತವನ್ನು ಪ್ರತ್ಯೇಕವಾಗಿ ಕಾಣಲು ಸಾಧ್ಯವಿಲ್ಲ. ಆದರೂ, ಭಾರತದ ಅಭಿವೃದ್ಧಿ ದರ ಶೇ 8 ಆಗಿದೆ. ಜತೆಗೆ, ಭಾರತವು ಹೂಡಿಕೆಯ ನೆಚ್ಚಿನ ತಾಣವಾಗಿದೆ’ ಎಂದು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.