ADVERTISEMENT

63 ಲಕ್ಷ ಮನೆ ಒಡೆಯಲು ಬಿಜೆಪಿ ಸಿದ್ಧತೆ: ಮನೀಷ್ ಸಿಸೋಡಿಯಾ ಆರೋಪ

ತೆರವು ಕಾರ್ಯಾಚರಣೆ: ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮೇ 2022, 20:54 IST
Last Updated 13 ಮೇ 2022, 20:54 IST
ದೆಹಲಿಯ ಶ್ಯಾಮನಗರದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಲಾಯಿತು –ಪಿಟಿಐ ಚಿತ್ರ
ದೆಹಲಿಯ ಶ್ಯಾಮನಗರದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಲಾಯಿತು –ಪಿಟಿಐ ಚಿತ್ರ   

ನವದೆಹಲಿ: ‘ದೆಹಲಿಯಲ್ಲಿ ಒಟ್ಟು 63 ಲಕ್ಷ ಮನೆಗಳನ್ನು ಒಡೆದುಹಾಕಲು ಬಿಜೆಪಿ ನೇತೃತ್ವದ ನಗರಪಾಲಿಕೆ ಸಿದ್ಧತೆ ನಡೆಸಿದೆ. ಈ ಸಂಬಂಧ 63 ಲಕ್ಷ ನೋಟಿಸ್‌ಗಳನ್ನು ನೀಡಿದೆ’ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.

ಶುಕ್ರವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿಯಲ್ಲಿರುವ ಅನಧಿಕೃತ ಕಾಲೊನಿಗಳಲ್ಲಿನ 60 ಲಕ್ಷ ಕಟ್ಟಡಗಳನ್ನು ತೆರವು ಮಾಡಲು ಪಾಲಿಕೆಗಳು ನೋಟಿಸ್ ನೀಡಿವೆ. ಜತೆಗೆ ಕಟ್ಟಡದ ನಿರ್ಮಾಣ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡಿರುವ 3 ಲಕ್ಷದಷ್ಟು ಮನೆಗಳ ತೆರವಿಗೆ ನೋಟಿಸ್‌ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಎಎಪಿ ಸರ್ಕಾರವಿದೆ. ಆದರೆ, ದೆಹಲಿಯ ಮೂರು ನಗರಪಾಲಿಕೆಗಳಲ್ಲಿ ಬಿಜೆಪಿ ಆಡಳಿತವಿದೆ.

ADVERTISEMENT

‘ಮನೆಯ ಬಾಲ್ಕನಿಯನ್ನು ವಿಸ್ತರಿಸಿಕೊಂಡಿರುವವರು, ಬಾಲ್ಕನಿಗೆ ಗಾಜು ಅಳವಡಿಸಿರುವವರಿಗೂ ನೋಟಿಸ್ ನೀಡಲಾಗಿದೆ. ಬಿಜೆಪಿ ನೇತೃತ್ವದ ಪಾಲಿಕೆಗಳು ನಡೆಸಲು ಹೊರಟಿರುವ ಈ ಕಾರ್ಯಾಚರಣೆಯಿಂದ ದೆಹಲಿಯ ಶೇ 70ರಷ್ಟು ಜನರು ನಿರ್ವಸಿತರಾಗಲಿದ್ದಾರೆ. ಕೋಟ್ಯಂತರ ಜನರು ಬೀದಿಗೆ ಬೀಳಲಿದ್ದಾರೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ಒತ್ತುವರಿ ಮತ್ತು ಅಕ್ರಮ ತೆರವು ಕಾರ್ಯಾಚರಣೆಯನ್ನು ಎಎಪಿ ವಿರೋಧಿಸುತ್ತದೆ. ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರವೇಶಿಸಬೇಕು. ಈ ಬಗ್ಗೆ ಅವರಿಗೆ ಪತ್ರ ಬರೆದಿದ್ದೇನೆ. ಅವರು ಈ ಕಾರ್ಯಾಚರಣೆಯನ್ನು ನಿಲ್ಲಿಸಲು ಸೂಚಿಸಬೇಕು’ ಎಂದು ಸಿಸೋಡಿಯಾ ಅವರು ಆಗ್ರಹಿಸಿದ್ದಾರೆ.

‘17 ವರ್ಷಗಳಲ್ಲಿ ಲಕ್ಷಾಂತರ ಮನೆಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲು ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಲಂಚ ಪಡೆದು ಇಂಥದ್ದಕ್ಕೆಲ್ಲಾ ಅವಕಾಶ ನೀಡಿದ್ದಾರೆ. ಆದರೆ ಈಗ ಜನರ ಮನೆಯನ್ನು ಮಾತ್ರ ಒಡೆಯಲಾಗುತ್ತಿದೆ. ಲಂಚ ಪಡೆದುಕೊಂಡವರ ವಿರುದ್ಧ ಯಾವುದೇ ಕ್ರಮ ಇಲ್ಲ. ಮೊದಲು ತಪ್ಪಿತಸ್ಥರನ್ನು ಗುರುತಿಸಿ, ಶಿಕ್ಷೆ ವಿಧಿಸಬೇಕು. ಅಲ್ಲಿಯವರೆಗೆ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿ’ ಎಂದು ಅವರು ಆಗ್ರಹಿಸಿದ್ದಾರೆ.

ಬಂದ್‌: ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಎಎಪಿ ಶಾಸಕ ಅಮಾನತ್‌ಉಲ್ಲಾ ಖಾನ್‌ ಅವರ ಬಂಧನವನ್ನು ಖಂಡಿಸಿ, ಶಾಹೀನ್‌ಬಾಗ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಬಂದ್ ಆಚರಿಸಲಾಗಿದೆ. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ, ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಕೆಟ್ಟ ವ್ಯಕ್ತಿತ್ವ’

ಎಎಪಿ ಶಾಸಕ ಅಮಾನತ್‌ಉಲ್ಲಾ ಖಾನ್‌ ಅವರನ್ನು ದೆಹಲಿ ಪೊಲೀಸರು ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಪಟ್ಟಿಗೆ ಸೇರಿಸಿದ್ದಾರೆ. ಜತೆಗೆ, ಅವರದ್ದು ‘ಕೆಟ್ಟ ವ್ಯಕ್ತಿತ್ವ’ ಎಂದು ಘೋಷಿಸಿದ್ದಾರೆ.

‘ಅಮಾನತ್‌ಉಲ್ಲಾ ಖಾನ್ ವಿರುದ್ಧ 18 ಎಫ್‌ಐಆರ್‌ಗಳು ದಾಖಲಾಗಿವೆ. ಕೊಲೆ, ಕೊಲೆಯತ್ನ, ಗಲಭೆ ನಡೆಸಿದ ಆರೋಪಗಳಿವೆ. ಅವರದ್ದು ‘ಕೆಟ್ಟ ವ್ಯಕ್ತಿತ್ವ’ ಎಂದು ಘೋಷಿಸಬೇಕು’ ಎಂದು ಜಾಮಿಯಾನಗರ ಪೊಲೀಸ್ ಠಾಣೆಯು ಇದೇ ಮಾರ್ಚ್‌ 28ರಂದು ಶಿಫಾರಸು ಮಾಡಿದೆ. ಅದನ್ನು ದೆಹಲಿ ಪೊಲೀಸ್ ಇಲಾಖೆಯು ಮಾರ್ಚ್‌ 30ರಂದೇ ಅನುಮೋದಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ.

ದೆಹಲಿ ನಗರ ಪಾಲಿಕೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ ಅಮಾನತ್ ಅವರನ್ನು ಪೊಲೀಸರು, ಗುರುವಾರ ಬಂಧಿಸಿದ್ದರು. ಮರುದಿನ ಈ ದಾಖಲೆಗಳು ಸೋರಿಕೆಯಾಗಿವೆ. ಅಮಾನತ್ ಅವರನ್ನು ಜಾಮೀನಿನ ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಗಿದೆ.

‘ದೆಹಲಿ ಬಿಜೆಪಿ ಅಧ್ಯಕ್ಷ ತೆರವು ಮಾಡಲಿ’

‘ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಅವರ ಮನೆ ಮತ್ತು ಕಚೇರಿ ನಿರ್ಮಾಣದ ವೇಳೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗಿದೆ. ಶನಿವಾರ ಬೆಳಿಗ್ಗೆ 11 ಗಂಟೆಯ ಒಳಗೆ ಆ ಒತ್ತುವರಿಯನ್ನು ತೆರವು ಮಾಡಬೇಕು’ ಎಂದು ಎಎಪಿಯು ದೆಹಲಿ ನಗರ ಪಾಲಿಕೆಗಳಿಗೆ ಗಡುವು ನೀಡಿದೆ.

‘ಅಕ್ರಮ ನಿರ್ಮಾಣ ಮತ್ತು ಒತ್ತುವರಿಗಳನ್ನು ತೆರವು ಮಾಡುತ್ತಿದ್ದೇವೆ ಎಂದು ಆದೇಶ್ ಗುಪ್ತಾ ಅವರು ಹೇಳುತ್ತಿರುತ್ತಾರೆ. ಅವರ ಮನೆಯಿಂದಾಗಿರುವ ಒತ್ತುವರಿಯನ್ನು ಮೊದಲು ತೆರವು ಮಾಡಲಿ. ಈ ಬಗ್ಗೆ ನಗರ ಪಾಲಿಕೆಗೆ ದೂರು ನೀಡಿದ್ದೇವೆ. ಆದರೆ, ಬಿಜೆಪಿ ಆಡಳಿತವಿರುವ ಪಾಲಿಕೆಯು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ. ಆನ್‌ಲೈನ್‌ ಮಾಧ್ಯಮಗೋಷ್ಠಿಯಲ್ಲಿ ಅವರು ಶುಕ್ರವಾರ ಈ ಆರೋಪ ಮಾಡಿದ್ದಾರೆ. ‘ಶನಿವಾರ ಬೆಳಿಗ್ಗೆ 11 ಗಂಟೆಯ ಒಳಗೆ ಆದೇಶ್‌ ಅವರ ಒತ್ತುವರಿಯನ್ನು ಪಾಲಿಕೆ ತೆರವು ಮಾಡಬೇಕು. ಇಲ್ಲದಿದ್ದಲ್ಲಿ, ಒತ್ತುವರಿ ತೆರವು ಮಾಡಲು ನಾವು ಬುಲ್ಡೋಜರ್ ತೆಗೆದುಕೊಂಡು ಹೋಗುತ್ತೇವೆ’ ಎಂದು ಸಿಸೋಡಿಯಾ ಎಚ್ಚರಿಕೆ ನೀಡಿದ್ದಾರೆ.

ಅನಧಿಕೃತ ಮಾಂಸದಂಗಡಿ ತೆರವಿಗೆ ಸಿದ್ಧತೆ

ದೆಹಲಿಯಲ್ಲಿರುವ ಅನಧಿಕೃತ ಮಾಂಸದ ಅಂಗಡಿಗಳನ್ನು ತೆರವು ಮಾಡಲು ಪಾಲಿಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ‘ಬವಾನಾ ಪ್ರದೇಶದಲ್ಲಿ ಅನಧಿಕೃತ ಮಾಂಸದಂಗಡಿಗಳು ಮತ್ತು ಅಕ್ರಮ ನಿರ್ಮಾಣಗಳ ತೆರವು ಕಾರ್ಯ ಕೈಗೊಳ್ಳಲು ಶುಕ್ರವಾರ ಪೊಲೀಸ್‌ ಭದ್ರತೆ ನೀಡಿ’ ಎಂದು ಪಾಲಿಕೆ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದರು. ಆದರೆ, ಮಾಂಸದಂಗಡಿಗಳನ್ನು ತೆರವು ಮಾಡಿದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಉಳಿದಂತೆ ಹಲವೆಡೆ ಅಕ್ರಮ ನಿರ್ಮಾಣ ತೆರವು ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ. ‌ಮಂಗೋಲ್‌ಪುರಿ, ಸಮಯಪುರ ಬದ್ಲಿ, ಕರೊಲ್ ಬಾಗ್‌, ಖೈಲಾ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲೂ ತೆರವು ಕಾರ್ಯಾಚರಣೆ ನಡೆಯಲಿದೆ.

ದೆಹಲಿಯಲ್ಲಿ ಅಕ್ರಮ ನಿರ್ಮಾಣ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ರಾಜಕೀಯ ಬಣ್ಣ ಪಡೆದುಕೊಂಡಿದೆ. ‘ಗಲಭೆ ನಡೆಸಿದವರ ಸ್ವತ್ತುಗಳನ್ನು ತೆರವು ಮಾಡಿ’ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಅವರು ದೆಹಲಿ ಪಾಲಿಕೆಗಳ ಮೇಯರ್‌ಗಳಿಗೆ ಈಚೆಗೆ ಪತ್ರ ಬರೆದಿದ್ದರು. ಆನಂತರ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿತ್ತು. ‘ಬಿಜೆಪಿಯು ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ತೆರವು ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಎಎಪಿ ಮತ್ತು ಕಾಂಗ್ರೆಸ್‌ ಆರೋಪಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.