ADVERTISEMENT

ಜಾಗ ಸ್ವಾದೀನಪಡಿಸಿಕೊಳ್ಳಲು ಸರ್ಕಾರಿ ಶಾಲೆ ಕೆಡವಲು ಮುಂದಾದ ಬಿಜೆಪಿ: ಎಎಪಿ ಆರೋಪ

ಪಿಟಿಐ
Published 7 ಏಪ್ರಿಲ್ 2023, 14:20 IST
Last Updated 7 ಏಪ್ರಿಲ್ 2023, 14:20 IST
ಎಎಪಿ ನಾಯಕ ಸಂಜಯ್‌ ಸಿಂಗ್‌ (ಪಿಟಿಐ ಚಿತ್ರ)
ಎಎಪಿ ನಾಯಕ ಸಂಜಯ್‌ ಸಿಂಗ್‌ (ಪಿಟಿಐ ಚಿತ್ರ)   

ನವದೆಹಲಿ: ದೀನ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿರುವ ತನ್ನ ನೂತನ ಕೇಂದ್ರ ಕಚೇರಿಗೆ ಸಮೀಪದಲ್ಲಿರುವ ಶಾಲೆಯನ್ನು ಕೆಡವಿ, ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಯೋಜಿಸುತ್ತಿದೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್‌ ಶುಕ್ರವಾರ ಆರೋಪಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಜಯ್‌, ತನ್ನ ನೂತನ ಕೇಂದ್ರ ಕಚೇರಿಯ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯನ್ನು ಬಿಜೆಪಿ ಒತ್ತುವರಿ ಮಾಡಿದೆ. ಇದೀಗ ಶಾಲೆಯ ಮೇಲೆ ಬುಲ್ಡೋಜರ್‌ ಓಡಿಸಲು ಮುಂದಾಗಿದೆ ಎಂದು ದೂರಿದ್ದಾರೆ.

'ತನ್ನ ಪ್ರಧಾನ ಕಚೇರಿ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯ ಜಾಗ ಸ್ವಾದೀನಪಡಿಸಿಕೊಳ್ಳಲು ಬಯಸಿರುವ ಬಿಜೆಪಿಯು, ಶಾಲೆಯನ್ನು ಉರುಳಿಸಲು ಮುಂದಾಗಿದೆ. ಅವರು ಮೊದಲು ಶಾಲೆಯ ಜಾಗವನ್ನು ಅತಿಕ್ರಮಣ ಮಾಡಿ ಪಕ್ಷದ ಕಚೇರಿ ನಿರ್ಮಿಸಿದರು. ಈಗ, ಅದರ ಮೇಲೆ ಬುಲ್ಡೋಜರ್‌ ಓಡಿಸಲು ಮುಂದಾಗಿದ್ದಾರೆ. ಆ ರೀತಿ ಆಗುವುದಕ್ಕೆ ಎಎಪಿ ಬಿಡುವುದಿಲ್ಲ' ಎಂದು ಹೇಳಿದ್ದಾರೆ.

ADVERTISEMENT

ಒಂದು ವೇಳೆ ಶಾಲೆ ಉರುಳಿದರೆ, 350ಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರವಾಗಲಿದೆ ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ.

'ಎಲ್ಲಿಯ ವರೆಗೆ ದೆಹಲಿಯಲ್ಲಿ ಎಎಪಿ ಸರ್ಕಾರವಿರುತ್ತದೋ, ಅಲ್ಲಿಯವರೆಗೆ ಒಂದೇ ಒಂದು ಶಾಲೆಯನ್ನು ಉರುಳಿಸಲು ಬಿಡುವುದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಶಾಲೆಯನ್ನು ಕೆಡವಲು ಬಿಜೆಪಿ ಯೋಜಿಸುತ್ತಿದೆ. ಆ ಪಕ್ಷವು ತನ್ನದೇ ಖಾಸಗಿ ಶಾಲೆಗಳನ್ನು ಹೊಂದಿದೆ. ವ್ಯವಹಾರದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಅದು ಮುಂದಾಗುತ್ತಿದೆ' ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.