ADVERTISEMENT

ಅಮೂಲ್‌ನೊಂದಿಗೆ ನಂದಿನಿಯ ಬಲವಂತದ ವಿಲೀನಕ್ಕೆ ಬಿಜೆಪಿ ಹುನ್ನಾರ: ಜೈರಾಮ್ ರಮೇಶ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 6:57 IST
Last Updated 12 ಏಪ್ರಿಲ್ 2023, 6:57 IST
 ಜೈರಾಮ್ ರಮೇಶ್
 ಜೈರಾಮ್ ರಮೇಶ್   

ಅಮಿತ್ ಶಾರವರ ಅಮೂಲ್‌ ಮತ್ತು ನಂದಿನಿಯ ನಡುವಿನ ಬಲವಂತದ ಸಹಕಾರವು ರಾಜ್ಯಗಳಲ್ಲಿನ ಡೇರಿ ಸಹಕಾರಿ ಸಂಘಗಳನ್ನು ನಿಯಂತ್ರಿಸುವ ಬಿಜೆಪಿಯ ಲಜ್ಜೆಗೆಟ್ಟ ನಡೆಯಾಗಿದೆ ಎಂದು ಕಾಂಗ್ರೆಸ್‌ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಬಗ್ಗೆ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಅಮೂಲ್‌ ಮತ್ತು ನಂದಿನಿ ಎರಡೂ ‘ಶ್ವೇತ ಕ್ರಾಂತಿಯ‘ ರಾಷ್ಟ್ರೀಯ ಯಶಸ್ಸಿನ ಕಥೆಗಳು. ಈ ಕ್ರಾಂತಿಯು ಡಾ. ವರ್ಗೀಸ್ ಕುರಿಯನ್ ಅವರಿಂದ 'ಆನಂದ್'ನಲ್ಲಿ ಆರಂಭಗೊಂಡಿತು. ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1965ರಲ್ಲಿ ರಾಷ್ಟ್ರೀಯ ಡೇರಿ ಡೆವಲಪ್‌ಮೆಂಟ್ ಬೋರ್ಡ್ ಸ್ಥಾಪಿಸಿದಾಗ ಭಾರತದಾದ್ಯಂತ ಹರಡಿತು. ಡಾ. ಕುರಿಯನ್ ಅವರು ಹೇಳಿರುವಂತೆ ‘ನಾನು ರೈತನ ಒಬ್ಬ ಉದ್ಯೋಗಿ‘ ಎಂಬ ಮಂತ್ರದ ಅಡಿಯಲ್ಲಿ ಸಹಕಾರಿ ಸಂಸ್ಥೆಗಳ ಈ ವ್ಯವಸ್ಥೆಯು ಪ್ರತಿ ರಾಜ್ಯದಲ್ಲಿ ಹಾಲು ಉತ್ಪಾದಿಸುವ ರೈತರ ಸಬಲೀಕರಣದ ಗುರಿ ಹೊಂದಿವೆ.

ADVERTISEMENT

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದಶಕಗಳಿಂದ ಈ ವಿಕೇಂದ್ರೀಕೃತ ವ್ಯವಸ್ಥೆಯನ್ನು ಪೋಷಿಸಿತ್ತಾ ಕೋಟ್ಯಂತರ ಹೈನುಗಾರರಿಗೆ ಶಕ್ತಿ ತುಂಬಿ ಅವರ ಸ್ವಾಯತ್ತತೆಯನ್ನು ಕಾಪಾಡಿತ್ತು. ಇದಕ್ಕೆ ತದ್ವಿರುದ್ಧವಾಗಿ ಅಮಿತ್ ಶಾ ಅವರು ತಮ್ಮ ನೇರ ಆಡಳಿತ ಮತ್ತು ನಿಯಂತ್ರಣದ ಅಡಿಯಲ್ಲಿ ಕೇಂದ್ರೀಕೃತವಾದ ವ್ಯವಸ್ಥೆ ಇರಬೇಕೆಂದು ಬಯಸುತ್ತಿದ್ದಾರೆ. ಇದು ಅಮಿತ್ ಶಾ ನೇತೃತ್ವದ ಹೊಸ 'ಸಹಕಾರ ಸಚಿವಾಲಯ'ದ ಅಜೆಂಡಾವಾಗಿದೆ. ಇದಕ್ಕಾಗಿಯೇ ಅವರು ‘ಎರಡು ಲಕ್ಷ ಗ್ರಾಮೀಣ ಡೈರಿಗಳನ್ನು‘ ಒಳಗೊಂಡ ಬಹು-ರಾಜ್ಯ ಸಹಕಾರಿ ಸಂಘವನ್ನು ರಚಿಸಲು 'ಅಮೂಲ್' ಜೊತೆಗೆ ಇತರ ಐದು ಸಹಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಲು ಬಯಸುತ್ತಿದ್ದಾರೆ.

ಸಹಕಾರ ಸಚಿವಾಲಯ ನಿಯಂತ್ರಣದ 'ಕ್ರೋನಾಲಜಿ'

6 ಜುಲೈ, 2021: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಹೊಸ 'ಸಹಕಾರ ಸಚಿವಾಲಯ'ದ ರಚನೆ

7 ಜುಲೈ, 2021: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಹಕಾರ ಸಚಿವರಾಗಿ ಹೆಚ್ಚುವರಿ ಹೊಣೆಗಾರಿಕೆ.

7 ಅಕ್ಟೋಬರ್, 2022: ಗ್ಯಾಂಗ್ಟಾಕ್‌ನಲ್ಲಿ ಅಮಿತ್ ಶಾ ಅವರಿಂದ ಡೇರಿ ಉತ್ಪನ್ನಗಳ 'ರಫ್ತು ಕೇಂದ್ರ'ಗಳಾಗಿ ಕಾರ್ಯನಿರ್ವಹಿಸಲು ಬಹು-ರಾಜ್ಯ ಸಹಕಾರ ಸಂಘಗಳನ್ನು ರಚಿಸುವ ಘೋಷಣೆ

9 ಅಕ್ಟೋಬರ್, 2022: ಗುವಾಹಟಿಯಲ್ಲಿ ಅಮಿತ್ ಶಾ ಅವರಿಂದ ‘ಅಮೂಲ್‌ ಇತರ ಐದು ಸಹಕಾರ ಸಂಘಗಳೊಂದಿಗೆ ವಿಲೀನಗೊಂಡು ಬಹು-ರಾಜ್ಯ ಸಹಕಾರಿ ಸಂಘವನ್ನು ರಚಿಸಲಿದೆ‘ ಎಂದು ಘೋಷಣೆ

30 ಡಿಸೆಂಬರ್, 2022: ಗ್ರಾಮೀಣ ಡೇರಿಗಳನ್ನು ಸ್ಥಾಪಿಸಲು ಅಮೂಲ್‌ ಮತ್ತು ಕೆಎಂಎಫ್ (ನಂದಿನಿ) ನಡುವೆ 'ಸಹಕಾರ'ಕ್ಕಾಗಿ ಅಮಿತ್ ಶಾ ಒತ್ತಾಯ

11 ಜನವರಿ, 2023: ಒಂದು ರಫ್ತಿಗೆ ಸೇರಿದಂತೆ ಮೂರು ಬಹು-ರಾಜ್ಯ ಸಹಕಾರಿ ಸಂಘಗಳಿಗೆ ಕೇಂದ್ರ ಸಂಪುಟ ಒಪ್ಪಿಗೆ

18 ಮಾರ್ಚ್, 2023: ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್ ಶಾ ಅವರಿಂದ ರಫ್ತು ಹೆಚ್ಚಿಸಲು ಎರಡು ಲಕ್ಷ ಗ್ರಾಮೀಣ ಡೇರಿಗಳನ್ನು ಬಹುರಾಜ್ಯ ಸಹಕಾರ ರಫ್ತು ಸೊಸೈಟಿಗೆ ಸಂಪರ್ಕಿಸುವ ಪ್ರಸ್ತಾಪ

ಈ ಮೇಲಿನ ಕ್ರೋನಾಲಜಿ ಪ್ರಕಾರ ತಿಳಿಯುವುದೇನೆಂದರೆ, ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವು ತಮ್ಮ ಎಂದಿನ ಕಾರ್ಯವಿಧಾನ ಅನುಸರಿಸುತ್ತಿದೆ. ಸಹಕಾರಿ ಸಂಸ್ಥೆಗಳು ರಾಜ್ಯ ಪಟ್ಟಿಗೆ ಸೇರುತ್ತವೆ ಎಂದು ಸ್ಪಷ್ಟವಾಗಿ ಹೇಳುವ ಸಂವಿಧಾನವನ್ನು ಅಲಕ್ಷಿಸಿ ಅವರು ತಮ್ಮ ಸಂಪೂರ್ಣ ನಿಯಂತ್ರಣ ಸ್ಥಾಪಿಸಲು ಹೊರಟಿದ್ದಾರೆ.

ನಂದಿನಿ, ಅಮೂಲ್, OMFED, ಮದರ್ ಡೇರಿ, ವಿಜಯ ಮತ್ತು ಆವಿನ್‌ನಂತಹ ಡೇರಿ ಸಹಕಾರಿ ಸಂಸ್ಥೆಗಳು ರೈತರಿಗೆ ಶಕ್ತಿ ತುಂಬಿ ಅವರ ಏಳಿಗೆಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, ನಂದಿನಿಯನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟವು 14 ಸಂಘಗಳಾಗಿ ಸಂಘಟಿತವಾಗಿರುವ 14,000 ಸಹಕಾರಿ ಸಂಘಗಳ ಒಂದು ಬೃಹತ್ ಒಕ್ಕೂಟವಾಗಿದೆ.

ಇದರ 24 ಲಕ್ಷ ಮಂದಿ ಸದಸ್ಯರು ದಿನಕ್ಕೆ 17 ಕೋಟಿಗೂ ಹೆಚ್ಚು ಗಳಿಸುತ್ತಾರೆ. ಈ ಐತಿಹಾಸಿಕ ಸಂಘಗಳನ್ನು ಹೊಸ 'ಬಹು-ರಾಜ್ಯ ಸಹಕಾರಿ ಸಂಘವಾಗಿ' ಮಾರ್ಪಡಿಸುವ ಮೂಲಕ ರೈತರ ನಿಯಂತ್ರಣದಲ್ಲಿರುವ ಸಂಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಿಜೆಪಿ ಮತ್ತು ಅಮಿತ್ ಶಾ ಬಯಸುತ್ತಿದ್ದಾರೆ.

ಹಾಲು ಒಕ್ಕೂಟಗಳನ್ನು ತಮ್ಮ ರಾಜಕೀಯ ಹಿತಾಸಕ್ತಿಯಾಗಿ ಬಳಸುವುದು ಬಿಜೆಪಿಯ ಉದ್ದೇಶ. ಕೆಎಂಎಫ್ ತನ್ನದೇ ಹಿತದ ವಿರುದ್ದವಾಗಿ ವರ್ತಿಸುವಂತೆ ಒತ್ತಾಯಿಸುವ ಪ್ರಯತ್ನ ಈ ಗುರಿಯತ್ತ ಕೇವಲ ಒಂದು ಹೆಜ್ಜೆ ಮಾತ್ರ. ಎಲ್ಲಾ ನಿರ್ಧಾರಗಳು ಬೆಂಗಳೂರು, ಭುವನೇಶ್ವರ್, ಚೆನ್ನೈ ಅಥವಾ ಪುಣೆಯಲ್ಲಿ ಆಗುವುದಿಲ್ಲ, ಬದಲಾಗಿ ದೆಹಲಿಯಲ್ಲಿ ಅಮಿತ್ ಶಾರವರ ಸಹಕಾರ ಮಂತ್ರಾಲಯದಲ್ಲಿ ತೆಗದುಕೊಳ್ಳಲಾಗುವವು. ಇದು ಹಾಲು ಉತ್ಪಾದಕ ರೈತರನ್ನು ದುರ್ಬಲಗೊಳಿಸಿ ಅಂತಿಮವಾಗಿ ಅವರ ಆದಾಯ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುತ್ತದೆ.

ಈ ಮಾದರಿಯನ್ನು ಈ ಮೊದಲು ಸಹ ನಾವು ನೋಡಿದ್ದೇವೆ. ಉದಾಹರಣೆಗೆ, ಕರ್ನಾಟಕದ ಅತ್ಯಂತ ಯಶಸ್ವಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದ್ದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲಾಯಿತು. ಅದೇ ರೀತಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಸ್‌ಬಿಐನೊಂದಿಗೆ ವಿಲೀನಗೊಂಡಿತು ಮತ್ತು ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿತು. ಈಗ ಕೇವಲ ಒಂದೇ ಒಂದು ಸಾರ್ವಜನಿಕ ವಲಯದ ಬ್ಯಾಂಕ್ ಕರ್ನಾಟಕದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. ಈ ಹಿಂದೆ ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕರ್ನಾಟಕದ ಅಭಿವೃದ್ಧಿಯ ನಿರ್ಧಾರಗಳು ಈಗ ಬರೋಡಾ ಮತ್ತು ಮುಂಬೈನಲ್ಲಿ ನಡೆಯುತ್ತಿವೆ.

ಭಾರತದ ರಾಜ್ಯಗಳ ಒಕ್ಕೂಟದ ವ್ಯವಸ್ಥೆ ಮತ್ತು ದೇಶದಲ್ಲಿ ವಿಕೇಂದ್ರೀಕರಣವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗಲೂ ಬೆಂಬಲಿಸುತ್ತದೆ. ಕಾಂಗ್ರೆಸ್ ಪಕ್ಷ ಅಮಿತ್ ಶಾರವರ ಮತ್ತು ಬಿಜೆಪಿಯ ಕೇಂದ್ರೀಕೃತ ನಿಯಂತ್ರಣದ ಪ್ರಯತ್ನಗಳನ್ನು ಬಲವಾಗಿ ವಿರೋಧಿಸುತ್ತದೆ. ಬಿಜೆಪಿಯು ಮುಂದೊಂದು ದಿನ 'ಒಂದು ದೇಶ, ಒಂದು ಹಾಲು' ಎಂಬ ಘೋಷಣೆ ಮಾಡುವ ಪ್ರಯತ್ನಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ಕರ್ನಾಟಕದ ನಮ್ಮ ಚುನಾವಣಾ ಪ್ರಚಾರದಲ್ಲಿ ಮತ್ತು ದೇಶಾದ್ಯಂತ ನಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಕೇಂದ್ರ ಸರ್ಕಾರದ ಇಂತಹ ನೀತಿಗಳ ಹಿಂದಿರುವ ದುಷ್ಟ ಅಜೆಂಡಾವನ್ನು ಜನರಿಗೆ ವಿವರಿಸುತ್ತೇವೆ ಮತ್ತು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕವೇ ಅವುಗಳನ್ನು ವಿರೋಧಿಸುವ ನಮ್ಮ ಸಂಕಲ್ಪವನ್ನು ಮುಂದುವರೆಸುತ್ತೇವೆ ಎಂದು ಜೈರಾಮ್‌ ರಮೇಶ್‌ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.