ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೂ ವಿದ್ಯಾರ್ಥಿಗಳಿಂದ ಪ್ರತಿಭಟನೆ ಬಿಸಿ

ಪಿಟಿಐ
Published 30 ಜುಲೈ 2022, 15:41 IST
Last Updated 30 ಜುಲೈ 2022, 15:41 IST
ಜೆಪಿ ನಡ್ಡಾ ಅವರು ಪಕ್ಷದ ವಿವಿಧ ಘಟಕಗಳ ಎರಡು ದಿನಗಳ ಸಮಾವೇಶವನ್ನು ಪಟ್ನಾದಲ್ಲಿ ಶನಿವಾರ ಉದ್ಘಾಟಿಸಿದರು – ಪಿಟಿಐ ಚಿತ್ರ
ಜೆಪಿ ನಡ್ಡಾ ಅವರು ಪಕ್ಷದ ವಿವಿಧ ಘಟಕಗಳ ಎರಡು ದಿನಗಳ ಸಮಾವೇಶವನ್ನು ಪಟ್ನಾದಲ್ಲಿ ಶನಿವಾರ ಉದ್ಘಾಟಿಸಿದರು – ಪಿಟಿಐ ಚಿತ್ರ   

ಪಟ್ನಾ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಾವು ಓದಿದ್ದ ಕಾಲೇಜಿನಲ್ಲೇ ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸುವಂತಾಗಿದೆ.

ಪಕ್ಷದ ಏಳು ಘಟಕಗಳ ಎರಡು ದಿನಗಳ ಸಮಾವೇಶ ಉದ್ಘಾಟಿಸುವ ಸಲುವಾಗಿ ಶನಿವಾರ ಪಟ್ನಾಗೆ ಬಂದ ಅವರು, ಮಾರ್ಗ ಮಧ್ಯೆ ತಾವು ಓದಿದ್ದ ಕಾಲೇಜಿಗೆ ಭೇಟಿ ನೀಡಿದರು. ಇದೇ ವೇಳೆ ಎಐಎಸ್‌ಎ ಸದಸ್ಯರು ‘ಜೆ.ಪಿ. ನಡ್ಡಾ ಗೋ ಬ್ಯಾಕ್’ ಘೋಷಣೆಗಳನ್ನು ಕೂಗಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ವಾಪಸ್ ಪಡೆಯಬೇಕು ಹಾಗೂ ಪಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ವಿವಿ ಮಾನ್ಯತೆ ಕೊಡಬೇಕು ಎಂಬ ಫಲಕಗಳನ್ನು ಪ್ರದರ್ಶಿಸಿದರು.

ಬಳಿಕ ಪೊಲೀಸ್ ಸಿಬ್ಬಂದಿ ನೆರವಿನಿಂದ ನಡ್ಡಾ ಅವರು ಸುರಕ್ಷಿತವಾಗಿ ಕಾಲೇಜು ಪ್ರವೇಶಿಸಿದರು. ಈ ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿಯ ವಿವಿಧ ಘಟಕಗಳ ಸಮಾವೇಶ ಭಾನುವಾರ ಸಮಾರೋಪಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.