ADVERTISEMENT

ಜಾರ್ಖಂಡ್ ಚುನಾವಣೆ | BJP ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ: ಅಸ್ಸಾಂ CM

ಪಿಟಿಐ
Published 24 ಅಕ್ಟೋಬರ್ 2024, 13:42 IST
Last Updated 24 ಅಕ್ಟೋಬರ್ 2024, 13:42 IST
<div class="paragraphs"><p>ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ</p></div>

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ

   

ಜಮ್ಶೆಡ್‌ಪುರ್: ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ ಸೃಜಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭರವಸೆ ನೀಡಿದ್ದಾರೆ. 

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಜ್ಯದಲ್ಲಿ ಗುರುವಾರ ಪ್ರಚಾರ ನಡೆಸಿದ ಅವರು, ‘‍ರಾಜ್ಯದಲ್ಲಿ 1.5 ಲಕ್ಷ ಉದ್ಯೋಗ ಸೃಜಿಸಲಾಗುವುದು. ಹರಿಯಾಣ, ಅಸ್ಸಾಂ ಹಾಗೂ ಮಧ್ಯಪ್ರದೇಶದಲ್ಲಿ ಇದನ್ನು ಬಿಜೆಪಿ ಜಾರಿಗೆ ತಂದಿದೆ. ಕೊಟ್ಟ ಭರವಸೆಯನ್ನು ಈಡೇರಿಸಲು ನರೇಂದ್ರ ಮೋದಿ ನಾಯಕತ್ವ ಸದಾ ಬದ್ಧವಾಗಿದೆ’ ಎಂದರು.

ADVERTISEMENT

‘ಹೇಮಂತ್ ಸೊರೇನ್ ನೇತೃತ್ವದ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಜತೆಗೆ ಖನಿಜ ಸಂಪತ್ತಿನ ದುರ್ಬಳಕೆ ಮಾಡಿಕೊಂಡಿದೆ’ ಎಂದು ಆರೋಪಿಸಿದರು.

‘ಜಾರ್ಖಂಡ್ ನೇಮಕಾತಿ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲಾಗುವುದು. ನಾನು ಬಹಳಷ್ಟು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಆದರೆ ಜಾರ್ಖಂಡ್‌ನಲ್ಲಿನ ಪರಿಸ್ಥಿತಿ ಹಾಗೂ ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆ ಪಿಡುಗು ಎಲ್ಲಿಯೂ ಇಲ್ಲ’ ಎಂದಿದ್ದಾರೆ.

‘ರಾಜ್ಯದಲ್ಲಿ ಸದ್ಯ ಆಡಳಿತದಲ್ಲಿರುವ ಸರ್ಕಾರವು ಸಾಮಾನ್ಯ ಜನರ ಪರವಾಗಿರುವ ಬದಲು ಬಾಂಗ್ಲಾ ನುಸುಳುಕೋರರು, ಮಾಫಿಯಾ ಹಾಗೂ ದಲ್ಲಾಳಿಗಳ ಪರವಾಗಿದೆ. ಹೇಮಂತ್ ಸೊರೇನ್ ಸರ್ಕಾರವು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡುತ್ತಿದೆಯೇ ಹೊರತು, ಸಾರ್ವಜನಿಕರಿಗೆ ಅಲ್ಲ. ಒಂದೊಮ್ಮೆ ಬಿಜೆಪಿಗೆ ಅಧಿಕಾರ ನೀಡಿದರೆ, ಹಿಂದೂ, ಆದಿವಾಸಿ ಮತ್ತು ಬಡವರ ಪರ ಸರ್ಕಾರ ರಚಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.