ತಿರುವನಂತಪುರಂ: ಗುರುವಾರ ಕೇರಳದಾದ್ಯಂತ ನಡೆಯಲಿರುವ ಹರತಾಳದಲ್ಲಿ ಹಿಂಸಾಚಾರ ನಡೆಸಿದವರನ್ನು ತಕ್ಷಣವೇ ಬಂಧಿಸಿ ಎಂದು ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಲೋಕನಾಥ್ ಬೆಹರಾ ಆದೇಶಿಸಿದ್ದಾರೆ. ಶಬರಿಮಲೆ ಕರ್ಮ ಸಮಿತಿ ಆಹ್ವಾನ ನೀಡಿರುವ ಈ ಹರತಾಳಕ್ಕೆ ಬಿಜೆಪಿ, ಸಂಘ ಪರಿವಾರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಬಲವಂತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುವುದಾಗಲೀ, ಯಾವುದೇ ರೀತಿಯ ಗಲಭೆಗಳಲ್ಲಿ ಭಾಗಿಯಾದವರನ್ನು ತಕ್ಷಣವೇ ಬಂಧಿಸಿ ಎಂದು ಎಲ್ಲ ವಲಯದ ಎಡಿಜಿಪಿ, ರೇಂಜ್ ಐಜಿಗಳಿಗೆ ಆದೇಶ ನೀಡಲಾಗಿದೆ.
ಹರತಾಳದಂದು ಸಾಮಾನ್ಯ ಜನ ಜೀವನ ಅಸ್ತವ್ಯಸ್ತವಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.ಒಂದು ವೇಳೆ ಪ್ರತಿಭಟನಾಕಾರರು ಸಂಚಾರ ವ್ಯವಸ್ಥೆಗೆ ತಡೆಯೊಡ್ಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಡಿಜಿಪಿ.
ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದರೆ ಪ್ರತಿಭಟನಾಕಾರರಿಂದ ಅದರ ನಷ್ಟದ ಹಣವನ್ನು ವಸೂಲಿ ಮಾಡಲಾಗುವುದು. ಅಂದರೆ ಈ ಕೃತ್ಯದಲ್ಲಿ ಭಾಗಿಯಾದವರ ಬ್ಯಾಂಕ್ ಖಾತೆಯಿಂದ ಅಥವಾ ವೈಯಕ್ತಿಕ ಆಸ್ತಿಗಳಿಂದ ಈ ಹಣ ವಸೂಲಿ ಮಾಡಲಾಗುವುದು.
ಅಂಗಡಿಗಳು ತೆರೆದಿದ್ದರೆ ಅವುಗಳಿಗೆ ಸಂರಕ್ಷಣೆ ನೀಡಲಾಗುವುದು. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಎಲ್ಲ ರಾಜಕೀಯ ಪಕ್ಷಗಳ ಕಚೇರಿಗಳಿಗೂ ರಕ್ಷಣೆ ನೀಡಲಾಗುವುದು. ಶಬರಿಮಲೆ ಯಾತ್ರಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಯುಂಟಾಗದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.