ನವದೆಹಲಿ: ಬಿಜೆಪಿ ಆಡಳಿತದ ಕೆಲವು ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತರುವ ಯೋಜನೆಯನ್ನು ಟೀಕಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಬಿಜೆಪಿಯ ಉದ್ದೇಶವು ರಾಜಕೀಯವಾಗಿದ್ದು, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಇರಾದೆಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
‘ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆಯಲ್ಲ. ಆದರೆ, ಮುಂದಿನ 20 ವರ್ಷಗಳಲ್ಲಿ ಹಿರಿಯ ವಯಸ್ಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ದೊಡ್ಡ ಸವಾಲಾಗಿ ಪರಿಣಾಮಿಸಲಿದೆ’ ಎಂದಿದ್ದಾರೆ.
'ಜನಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಹೇಳುತ್ತಿರುವ ಮೂರು ರಾಜ್ಯಗಳಲ್ಲಿ (ಉತ್ತರ ಪ್ರದೇಶ, ಅಸ್ಸಾಂ ಮತ್ತು ಲಕ್ಷದ್ವೀಪ) ಬಿಜೆಪಿಗುರಿಯಾಗಿಸಿದ ಜನರು ಯಾರೆಂಬುದು ಎಲ್ಲರಿಗೂ ತಿಳಿದಿದೆ' ಎಂದು ಹೇಳಿದರು.
'ನಮ್ಮ ರಾಜಕೀಯದಲ್ಲಿನ ಹಿಂದುತ್ವ ಅಂಶಗಳು ನಿಜವಾಗಿಯೂ ಜನಸಂಖ್ಯಾ ಸಮಸ್ಯೆಗಳನ್ನು ಅಧ್ಯಯನ ಮಾಡಿಲ್ಲ. ಇದರ ಉದ್ದೇಶವು ರಾಜಕೀಯ ಹಾಗೂ ಕೋಮುವಾದ ಪ್ರೇರಿತವಾಗಿದೆ' ಎಂದಿದ್ದಾರೆ.
ಹೆಚ್ಚುತ್ತಿರುವ ಜನಸಂಖ್ಯೆ ಅಭವೃದ್ಧಿಗೆ ಅಡ್ಡಿ ಎಂದು ಹೇಳಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜನಸಂಖ್ಯಾ ನಿಯಂತ್ರಣಕ್ಕೆ ನೀತಿ ಪ್ರಕಟಿಸಿದ್ದಾರೆ. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.