ನವದೆಹಲಿ: ಗೋವಾ ವಿಧಾನಸಭೆ ಚುವಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸಿದೆ. 34 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರ್‍ರೀಕರ್ ಅವರ ಮಗ ಉತ್ಪಲ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ಗೋವಾದ ಚುನಾವಣೆ ಉಸ್ತುವಾರಿ ವಹಿಸಿರುವ ದೇವೇಂದ್ರ ಫಡಣವಿಸ್ ಅವರು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮತ್ತೆ ಸಾಂಕೆಲಿಮ್ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ.
ಗೋವಾದ 40 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಎಎಪಿ ಮತ್ತು ಟಿಎಂಸಿ ಸಹ ಗೋವಾ ಚುನಾವಣೆಯಲ್ಲಿ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದು, ಮತದಾರರ ತೀರ್ಪಿನ ಕುರಿತು ಕುತೂಹಲ ಮೂಡಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಎಲ್ಲ 40 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಪರ್‍ರೀಕರ್ ಅವರ ಮಗ ಉತ್ಪಲ್ ಅವರಿಗೆ ಪಣಜಿ ಟಿಕೆಟ್ ನಿರಾಕರಿಸಿರುವ ಬಿಜೆಪಿ, ಬಿಜೆಪಿಗೆ ಸೇರ್ಪಡೆಯಾಗಿರುವ ಅಟನಾಸಿಯೊ 'ಬಾಬುಷ್' ಮಾನ್ಸೆರಟೆ ಅವರಿಗೆ ಟಿಕೆಟ್ ಕೊಟ್ಟಿದೆ. ಮನೋಹರ್ ಪರ್‍ರೀಕರ್ ಅವರು 1994ರಿಂದ 2019ರ ಮಾರ್ಚ್ ವರೆಗೂ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2019ರ ಜುಲೈನಲ್ಲಿ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಬೆಂಬಲ ನೀಡುವಂತೆ ಮಾಡುವಲ್ಲಿ ಕಾಂಗ್ರೆಸ್ ಮಾಜಿ ಮುಖಂಡ ಅಟನಾಸಿಯೊ ಪ್ರಮುಖ ಪಾತ್ರವಹಿಸಿದ್ದರು.
'ಉತ್ಪಲ್ ಅವರಿಗೆ ಸ್ಪರ್ಧಿಸಲು ಎರಡು ಕ್ಷೇತ್ರಗಳ ಆಯ್ಕೆ ನೀಡಿದ್ದೇವೆ. ಈಗಾಗಲೇ ಒಂದು ಕ್ಷೇತ್ರವನ್ನು ಅವರು ತಿರಸ್ಕರಿಸಿದ್ದಾರೆ. ಎರಡನೇ ಆಯ್ಕೆಯನ್ನು ಅವರು ಪರಿಗಣಿಸಬೇಕು ಎಂಬುದು ನಮ್ಮೆಲ್ಲರ ಇಚ್ಛೆಯಾಗಿದೆ...' ಎಂದು ದೇವೇಂದ್ರ ಫಡಣವಿಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.