ADVERTISEMENT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ 3ನೇ ಪಟ್ಟಿ ಬಿಡುಗಡೆ

25 ಹೆಸರು ಘೋಷಣೆ l ಕಾಂಗ್ರೆಸ್‌ನಿಂದ ಬಂದವರಿಗೂ ಟಿಕೆಟ್

ಪಿಟಿಐ
Published 28 ಅಕ್ಟೋಬರ್ 2024, 14:16 IST
Last Updated 28 ಅಕ್ಟೋಬರ್ 2024, 14:16 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ 25 ಅಭ್ಯರ್ಥಿಗಳ ಹೆಸರಿರುವ ಮೂರನೇ ಪಟ್ಟಿಯನ್ನು ಬಿಜೆ‍ಪಿ ಸೋಮವಾರ ಬಿಡುಗಡೆಗೊಳಿಸಿದೆ.

ಕಾಂಗ್ರೆಸ್‌ನಿಂದ ಪಕ್ಷಾಂತರವಾಗಿರುವ ಇಬ್ಬರು ನಾಯಕರಿಗೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಆಪ್ತ ಸಹಾಯಕನಿಗೆ ಮೂರನೇ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.

ADVERTISEMENT

ಒಟ್ಟು 288 ಕ್ಷೇತ್ರಗಳಿಗೆ ನವೆಂಬರ್‌ 20ರಂದು ಮತದಾನ ನಡೆಯಲಿದ್ದು, ಬಿಜೆಪಿ ಈವರೆಗೆ ಒಟ್ಟು 146 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಇತ್ತೀಚೆಗೆ ಬಿಜೆಪಿ ಸೇರಿರುವ ಜಿತೇಶ್‌ ಅಂತಪುರಕರ್‌ ಅವರು ದೇಗಲೂರಿನಿಂದ ಕಣಕ್ಕಿಳಿಯಲ್ಲಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ಶಿವರಾಜ್‌ ಪಾಟೀಲ್ ಅವರ ಸೊಸೆ ಅರ್ಚನಾ ಪಾಟೀಲ್ ಅವರು ಲಾತೂರ್‌ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಹಲವು ವರ್ಷಗಳಿಂದ ಫಡಣವೀಸ್‌ ಆಪ್ತ ಸಹಾಯಕರಾಗಿರುವ ಸುಮೀತ್‌ ವಾಂಖೆಡೆ ಅವರಿಗೆ ಅರ್ವಿ ಕ್ಷೇತ್ರದ ಟಿಕೆಟ್‌ ಲಭಿಸಿದೆ.

ಬೊರೀವಲಿ ಶಾಸಕ ಸುನಿಲ್‌ ರಾಣೆ ಅವರಿಗೆ ಕೋಕ್‌ ನೀಡಿರುವ ಬಿಜೆಪಿ, ಅವರ ಬದಲಿಗೆ ಸಂಜಯ್‌ ಉಪಾಧ್ಯಾಯ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ರಂಜಿತ್‌ ದೇಶ್‌ಮುಖ್ ಅವರು ಸಾವನೇರ್‌ನಿಂದ ಸ್ಪರ್ಧಿಸಲಿದ್ದಾರೆ.

ಬಿಜೆಪಿಯ ಮೂರನೇ ಪಟ್ಟಿಯಲ್ಲಿ ನಾಲ್ವರು ಮಹಿಳೆಯರ ಹೆಸರು ಘೋಷಣೆಯಾಗಿದೆ. 

‘ಮಹಾಯುತಿ’ಯನ್ನು ಕಿತ್ತೊಗೆಯಲು ಒಟ್ಟಾಗಿರೋಣ: ಅಖಿಲೇಶ್‌
ಲಖನೌ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವನ್ನು ಕಿತ್ತೊಗೆಯಲು ಎಲ್ಲರೂ ಒಟ್ಟಾಗಿ ಕಾರ್ಯತಂತ್ರ ರೂಪಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸೋಮವಾರ ಕರೆ ನೀಡಿದ್ದಾರೆ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ ಶಿವಸೇನಾ(ಶಿಂದೆ ಬಣ) ಮತ್ತು ಎನ್‌ಸಿಪಿ(ಅಜಿತ್‌ ಬಣ) ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್‌ ವಿರೋಧಿಗಳನ್ನು ಸೋಲಿಸಿ ಬದಲಾವಣೆ ತರಲು ಬದ್ಧರಾಗಿರುವುದಾಗಿ ‘ಎಕ್ಸ್‌’ನಲ್ಲಿ ತಿಳಿಸಿದರು. ‘ಈ ಬಾರಿಯ ಚುನಾವಣೆಯು ಮಹಾರಾಷ್ಟ್ರದಲ್ಲಿ ಬಿಜೆಪಿ ಮಾಡುತ್ತಿರುವ ವಿಧ್ವಂಸಕ ಪಿತೂರಿ ಮತ್ತು ಕೋಮುವಾದದ ರಾಜಕಾರಣವನ್ನು ಕೊನೆಗೊಳಿಸಲಿದೆ. ವಿರೋಧ ಪಕ್ಷಗಳ ಕೂಟದ ಸಕಾರಾತ್ಮಕ ಕಾರ್ಯತಂತ್ರವನ್ನು ಅರಿಯುವಲ್ಲಿ ಬಿಜೆಪಿ ವಿಫಲವಾಗಿದೆ. ಮಹಾರಾಷ್ಟ್ರದ ಆರ್ಥಿಕತೆಯನ್ನು ನಿಧಾನವಾಗಿ ನಾಶ ಮಾಡುವ ಬಿಜೆಪಿಯ ಷಡ್ಯಂತ್ರವು ರಾಜ್ಯದ ಜನರ ಮುಂದೆ ಬಯಲಾಗಿದೆ’ ಎಂದು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.