ADVERTISEMENT

ಸಂವಿಧಾನ ನಾಶ ಬಿಜೆಪಿ, ಆರ್‌ಎಸ್ಎಸ್ ಅಜೆಂಡಾ: ಕಾಂಗ್ರೆಸ್

ಸಂವಿಧಾನದ ಬದಲಿಗೆ 400 ಸೀಟು ಅಗತ್ಯ ಎಂಬ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಪಿಟಿಐ
Published 10 ಮಾರ್ಚ್ 2024, 15:07 IST
Last Updated 10 ಮಾರ್ಚ್ 2024, 15:07 IST
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ದೇಶದ ಸಂವಿಧಾನವನ್ನು ನಾಶಪಡಿಸುವುದು ಮತ್ತು ತಿದ್ದುಪಡಿ ಮಾಡುವುದು ಬಿಜೆಪಿ ಮತ್ತು ಆರ್‌ಎಸ್ಎಸ್‌ನ ‘ರಹಸ್ಯ ಮತ್ತು ಮೋಸದ’ ಕಾರ್ಯಸೂಚಿಯಾಗಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ. 

ಸಂವಿಧಾನದ ಬದಲಾವಣೆಗೆ 400 ಸೀಟುಗಳ ಅಗತ್ಯವಿದೆ ಎಂಬ ಬಿಜೆಪಿ ಸಂಸದರೊಬ್ಬರ ಹೇಳಿಕೆಯು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಘ ಪರಿವಾರದ ರಹಸ್ಯ ಉದ್ದೇಶವನ್ನು ಬಹಿರಂಗಗೊಳಿಸಿದೆ. ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ನಾಶ ಮಾಡುವುದು ಬಿಜೆಪಿ, ನರೇಂದ್ರ ಮೋದಿ ಸರ್ಕಾರದ ಪ್ರಮುಖ ಧ್ಯೇಯೋದ್ದೇಶವಾಗಿದೆ ಎಂದು ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. 

ದೇಶದಲ್ಲಿ ಸರ್ವಾಧಿಕಾರವನ್ನು ಹೇರಿಕೆ ಮಾಡುವ ಪ್ರಧಾನಿ ಮೋದಿ ಹಾಗೂ ಆರ್‌ಎಸ್ಎಸ್ ಕಾರ್ಯಸೂಚಿಯನ್ನು ಬಿಜೆಪಿ ಸಂಸದರ ಹೇಳಿಕೆಯುು ಬಟಾಬಯಲು ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ. 

ADVERTISEMENT

‘ದೇಶದಲ್ಲಿ ರಹಸ್ಯವಾಗಿ ಸರ್ವಾಧಿಕಾರವನ್ನು ಹೇರಲು ಮೋದಿ ಸರ್ಕಾರ, ಬಿಜೆಪಿ ಮತ್ತು ಆರ್‌ಎಸ್ಎಸ್ ಹಂಬಲಿಸುತ್ತಿವೆ. ಈ ಮೂಲಕ ಭಾರತದ ಜನರ ಮೇಲೆ ‘ಮನುವಾದ ಮನಃಸ್ಥಿತಿ’ಯನ್ನು ಹೇರಲಿದ್ದು, ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಸಿದುಕೊಳ್ಳಲಿದೆ’ ಎಂದು ‘ಎಕ್ಸ್’ ವೇದಿಕೆಯಲ್ಲಿ ತಿಳಿಸಿದ್ದಾರೆ. 

‘ಮುಂದಿನ ದಿನಗಳಲ್ಲಿ ಚುನಾವಣೆಗಳೇ ಇರುವುದಿಲ್ಲ. ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುವುದು. ವಾಕ್ ಸ್ವಾತಂತ್ರ್ಯವನ್ನು ಸದೆಬಡಿಯಲಾಗುವುದು. ಆರ್‌ಎಸ್ಎಸ್ ಮತ್ತು ಬಿಜೆಪಿಯು ನಮ್ಮ ಜಾತ್ಯತೀತ ಮತ್ತು ವೈವಿದ್ಯತೆಯಲ್ಲಿ ಏಕತೆಯನ್ನು ಹಾಳು ಮಾಡಲಿವೆ. ಆದರೆ, ಸಂಘ ಪರಿವಾರದ ಈ ಯತ್ನ ಯಶಸ್ವಿಯಾಗಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.

ಸಂವಿಧಾನ ರಕ್ಷಿಸಿ, ಬಿಜೆಪಿ ಓಡಿಸಿ ಎಂಬ ಹ್ಯಾಷ್‌ಟ್ಯಾಗ್ ಬಳಸಿ, ‘ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.