ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರದಿರುವ ಕಾರಣ, ಮಹಾರಾಷ್ಟ್ರದಲ್ಲಿ ಪಕ್ಷದ ನಾಯಕತ್ವವನ್ನು ಬದಲಿಸಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಅದನ್ನು ಬಿಜೆಪಿ ಅಲ್ಲಗಳೆದಿದೆ.
ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಮಹಾರಾಷ್ಟ್ರ ಬಿಜೆಪಿ ಕೋರ್ ಕಮಿಟಿ ಸಭೆ ನಂತರ ವದಂತಿ ಕುರಿತು ಸ್ಪಷ್ಟನೆ ದೊರೆತಿದೆ.
ಸಭೆ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, 'ಮಹಾರಾಷ್ಟ್ರದಲ್ಲಿ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ತಿಳಿಸಿದ್ದಾರೆ.
'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 'ಮಹಾಯುತಿ' (ಬಿಜೆಪಿ, ಶಿವಸೇನಾ, ಎನ್‌ಸಿಪಿ) ಮೈತ್ರಿಕೂಟ ಪುನರಾಯ್ಕೆಯಾಗುವುದನ್ನು ಖಾತ್ರಿಪಡಿಸಲು ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
'ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮೈತ್ರಿ ಪಕ್ಷಗಳೊಂದಿಗೆ ಚುನಾವಣೆ ಗೆಲ್ಲುವುದು ಹೇಗೆ ಎಂಬ ಬಗ್ಗೆ ನೀಲಿನಕ್ಷೆ ರೂಪಿಸಿದ್ದೇವೆ' ಎಂದು ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾದ ಬಿ.ಎಲ್.ಸಂತೋಷ್, ಭೂಪೇಂದ್ರ ಯಾದವ್, ಅಶ್ವಿನಿ ವೈಷ್ಣವ್, ರಾಜ್ಯ ಬಿಜೆಪಿ ನಾಯಕರಾದ, ಚಂದ್ರಶೇಖರ್ ಬವಾಂಕುಲೆ, ಸುಧೀರ್ ಮುಂಗಂತಿವಾರ್, ಚಂದ್ರಕಾಂತ್ ಪಾಟೀಲ್, ಪಂಕಜಾ ಮುಂಡೆ, ರಾವ್‌ಸಾಹೇಬ್ ದಾನ್ವೆ, ವಿನೋದ್ ತಾವ್ಡೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳಿವೆ. ಈಚೆಗೆ ನಡೆದ ಚುನಾವಣೆಯಲ್ಲಿ 'ಮಹಾಯುತಿ' ಮೈತ್ರಿಕೂಟ 17 ಕ್ಷೇತ್ರಗಳಲ್ಲಷ್ಟೇ ಜಯ ಗಳಿಸಿದೆ. ಬಿಜೆಪಿ 9, ಶಿವಸೇನಾ 7 ಮತ್ತು ಎನ್‌ಸಿಪಿ 1 ಸ್ಥಾನ ಗೆದ್ದಿದೆ.
ಕಾಂಗ್ರೆಸ್, ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ ಒಳಗೊಂಡ ಎಂವಿಎ ಮೈತ್ರಿಕೂಟ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ, ಕಾಂಗ್ರೆಸ್ 13 ಸ್ಥಾನಗಳಲ್ಲಿ, ಶಿವಸೇನಾ (ಯುಬಿಟಿ) 9 ಕಡೆ ಹಾಗೂ ಎನ್‌ಸಿಪಿ (ಎಸ್‌ಪಿ) 8ರಲ್ಲಿ ಗೆಲುವು ಸಾಧಿಸಿದೆ. ಉಳಿದೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
2019ರ ಚುನಾವಣೆಯಲ್ಲಿ ಬಿಜೆಪಿಯೇ 23 ಸ್ಥಾನಗಳನ್ನು ಗೆದ್ದಿತ್ತು.
ಈ ಸೋಲಿನ ಬೆನ್ನಲ್ಲೇ, ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಹೇಳಿದ್ದ ಫಡಣವಿಸ್, ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದರು. ಹಾಗೆಯೇ, 'ಮಹಾಯುತಿ' ಮೈತ್ರಿಕೂಟದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಮುಂದುವರಿಸುವುದು ಅನುಮಾನ ಎಂಬ ಮಾತುಗಳೂ ಕೇಳಿ ಬಂದಿದ್ದವು.
ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.