ನವದೆಹಲಿ: ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ಧಿಕಿ ಅವರ ಕೊಲೆಯ ಹಿಂದಿರುವ ಯಾರನ್ನೂ ಬಿಡುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಘಟನೆಯ ಕುರಿತು ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ಕೇಂದ್ರ ಸಚಿವ ಸೈಯದ್ ಶಾನವಾಜ್ ಹುಸೇನ್, ‘ಬಾಬಾ ಸಿದ್ದಿಕಿ ಅವರು ಒಬ್ಬ ಶ್ರೇಷ್ಠ ವ್ಯಕ್ತಿ. ಅವರ ಕೊಲೆಯಿಂದ ನಾವೆಲ್ಲರೂ ಬಹಳ ದುಃಖಿತರಾಗಿದ್ದೇವೆ. ಕೊಲೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಈ ಕೃತ್ಯದ ಹಿಂದೆ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
‘ಸಿದ್ಧಿಕಿ ಅವರ ಕೊಲೆಯಲ್ಲಿ ಭಾಗಿಯಾಗಿರುವ ಯಾರನ್ನೂ ಮಹಾರಾಷ್ಟ್ರ ಪೊಲೀಸರು ಬಿಡುವುದಿಲ್ಲ. ಸಿದ್ಧಿಕಿ ಅವರ ಸಾವಿನಿಂದ ಇಡೀ ದೇಶ ದುಃಖದಲ್ಲಿದೆ. ಆದರೆ, ವಿರೋಧ ಪಕ್ಷದ ನಾಯಕರು ಈ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಹುಸೇನ್ ಕಿಡಿಕಾರಿದರು.
ಘಟನೆಯ ಕುರಿತು ಶಿವಸೇನಾ (ಯುಬಿಟಿ) ಮತ್ತು ಕಾಂಗ್ರೆಸ್ ನಾಯಕರು ಅತ್ಯಂತ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ರಾಜಕೀಯ ನಡೆಯುತ್ತಿರುವುದು ಅತ್ಯಂತ ದುಃಖಕರ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶನಿವಾರ ರಾತ್ರಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಬಾಬಾ ಸಿದ್ಧಿಕಿ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.