ನವದೆಹಲಿ: ಗುಜರಾತ್‌ನಿಂದ ದೆಹಲಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರೂ ವಲಸಿಗರೇ ಎಂಬ ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಗೆ ಬಿಜೆಪಿ ಆಕ್ರೋಶಗೊಂಡಿದೆ. ಚೌಧರಿ ಬೇಷರತ್ ಕ್ಷಮಾಪಣೆ ಕೋರಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಆಗ್ರಹಿಸಿದ್ದಾರೆ.
ಮೋದಿ ಮತ್ತು ಅಮಿತ್ ಶಾ ಅವರು ಆತಿಕ್ರಮಣಕಾರರು ಎನ್ನುವ ಮೂಲಕ ಅವರನ್ನು ಕಾಂಗ್ರೆಸ್ ಅಪಮಾನಿಸಿದೆ ಎಂದು ಜೋಶಿ ಆರೋಪಿಸಿದ್ದಾರೆ.
‘ಇದೇ ವೇಳೆ ವಿದೇಶದಿಂದ ಬಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಕೂಡ ವಲಸಿಗರೇ,’ ಎಂದೂ ಜೋಶಿ ಹೇಳಿದ್ದಾರೆ.
ಇದೇ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ಸೋಮವಾರ ಗದ್ದಲ ಸೃಷ್ಟಿಸಿದರು. ಲೋಕಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಸಂಸದ ಉದಯ್ ಪ್ರತಾಪ್ ಸಿಂಗ್ ಈ ವಿಷಯ ಪ್ರಸ್ತಾಪಿಸಿದರು. ‘ಮೋದಿ ಅಮಿತ್ ಶಾ ಅವರನ್ನು ಕಾಂಗ್ರೆಸ್ ಅಪಮಾನಿಸಿದೆ,’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಅಧೀರ್ ರಂಜನ್ ಚೌಧರಿ ಅವರು ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರನ್ನು ಪ್ರೋತ್ಸಾಹಿಸುತ್ತಿದೆ. ಬಿಜೆಪಿ ಸರ್ಕಾರ ಅದನ್ನು ತಡೆಯುತ್ತಿದೆ,’ ಎಂದೂ ಉದಯ್ ಪ್ರತಾಪ್ ಹೇಳಿದರು. ಇದಕ್ಕೆ ಧನಿಗೂಡಿಸಿದ ಬಿಜೆಪಿ ಸದಸ್ಯರು, ‘ಅಧೀರ್ ರಂಜನ್ ಚೌಧರಿಯವರು ಮೋದಿ ಮತ್ತು ಶಾ ಅವರ ಕ್ಷಮಾಪಣೆ ಕೋರಬೇಕು,’ ಎಂದು ಪಟ್ಟು ಹಿಡಿದರು.
‘ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೇಶದ ಬಲಿಷ್ಠ ನಾಯಕರು,’ ಎಂದೂ ಬಿಜೆಪಿ ನಾಯಕರು ಇದೇ ವೇಳೆ ಬಣ್ಣಿಸಿದ್ದಾರೆ.
ಏನಿದು ವಿವಾದ?
ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ಕುರಿತು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಚೌದರಿ, ‘ಭಾರತ ಎಲ್ಲರ ದೇಶ. ಆದರೆ ಬಿಜೆಪಿ ಧರ್ಮಗಳ ನಡುವೆ ಭಯ ಹುಟ್ಟಿಸುತ್ತಿದೆ. ಆ ಮೂಲಕ ಮುಸ್ಲಿಮರನ್ನು ಹೊರಗಟ್ಟುವ ಪ್ರಯತ್ನ ಮಾಡುತ್ತಿದೆ. ಆದರೆ, ಅದು ಅವರಿಂದ ಸಾಧ್ಯವಿಲ್ಲ. ಮೋದಿ ಮತ್ತು ಅಮಿತ್ ಶಾ ಅವರ ಮನೆ ಇರುವುದು ಗುಜರಾತ್‌ನಲ್ಲಿ. ಆದರೆ, ಅವರೀಗ ದೆಹಲಿಯಲ್ಲಿದ್ದಾರೆ. ಅವರನ್ನು ನಾನು ವಲಸಿಗರುಎಂದು ಕರೆಯಬಹುದೇ?’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.