ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿತ್ತು. ಆದರೆ ಸಮೀಕ್ಷೆ ಉಲ್ಟಾ ಆಗಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಬಿಜೆಪಿ ಗೆಲುವಿನ ಸಂಭ್ರಮಾಚರಣೆಗೆ ಕಾರ್ಯಕರ್ತರು ಜಿಲೇಬಿ ಹಂಚಿದ್ದಾರೆ. ಈ ನಡುವೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ದೆಹಲಿ ಮನೆಗೆ ಹರಿಯಾಣ ಬಿಜೆಪಿ ಅನ್‌ಲೈನ್ ಆಹಾರ ತಾಣ ಸ್ವಿಗ್ಗಿ ಮೂಲಕ 1 ಕೆ.ಜಿ. ಜಿಲೇಬಿಯನ್ನು ಕಳುಹಿಸಿದೆ. ಅಲ್ಲದೆ ಹಣ ಪಾವತಿಸಿ ಜಿಲೇಬಿ ಸ್ವೀಕರಿಸುವಂತೆ ಮಾಡಿದೆ.
ಈ ಕುರಿತು ಹರಿಯಾಣ ಬಿಜೆಪಿ ಎಕ್ಸ್ ಖಾತೆಯಲ್ಲಿ ಜಿಲೇಬಿ ಆರ್ಡರ್ ಮಾಡಿದ ಸ್ಕ್ಕೀನ್‌ಶಾಟ್ ಹಂಚಿಕೊಂಡಿದೆ. ಜತೆಗೆ ‘ಹರಿಯಾಣ ಬಿಜೆಪಿಯ ಎಲ್ಲ ಕಾರ್ಯಕರ್ತರ ಪರವಾಗಿ ರಾಹುಲ್ ಗಾಂಧಿ ಅವರ ಮನೆಗೆ ಜಿಲೇಬಿ ಕಳುಹಿಸಲಾಗಿದೆ’ ಎಂದು ಬರೆದುಕೊಂಡಿದೆ.
ರಾಹುಲ್ ಗಾಂಧಿ ಅವರಿಗೆ ಜಿಲೇಬಿ ಮೂಲಕ ತಮಾಷೆ ಮಾಡಲು ಕಾರಣವೆಂದರೆ...
ಚುನಾವಣಾ ಪ್ರಚಾರದ ವೇಳೆ ಹರಿಯಾಣಕ್ಕೆ ತೆರಳಿದ್ದ ರಾಹುಲ್ ಗಾಂಧಿ, ಸ್ಥಳೀಯವಾಗಿ ತಯಾರಿಸುವ ಜಿಲೇಬಿ ತಮಗೆ ಇಷ್ಟ ಎಂದು ಹೇಳಿದ್ದರು. ರ್‍ಯಾಲಿಯಲ್ಲಿ ಮಾತನಾಡುವ ವೇಳೆ, ರಾಜ್ಯದಲ್ಲಿ ಪ್ರಸಿದ್ಧವಾಗಿರುವ ‘ಮಾತು ರಾಮ್ ಹಲ್ವಾಯಿ ಜಿಲೇಬಿ‘ ಸವಿದಿದ್ದೇನೆ. ನನ್ನ ಜೀವನದಲ್ಲಿ ತಿಂದ ಅತ್ಯಂತ ರುಚಿಕರ ಜಿಲೇಬಿಯದು. ಈ ಕುರಿತು ನನ್ನ ಸಹೋದರಿ ಪ್ರಿಯಾಂಕ ಅವರಿಗೂ ತಿಳಿಸಿದ್ದೇನೆ. ದೀಪೇಂದರ್ ಮತ್ತು ಭಜರಂಗ್ ಪೂನಿಯಾ ಬಳಿ ಈ ಜಿಲೇಬಿ ಜಗತ್ತಿನ ವಿವಿಧ ಪ್ರದೇಶಗಳಿಗೂ ತಲುಪಬೇಕು ಎಂದು ಹೇಳಿದ್ದೇನೆ’ ಎಂದು ಹೇಳಿದ್ದರು.
ರಾಹುಲ್ ಅವರ ಈ ಮಾತುಗಳನ್ನೇ ಆಧಾರವಾಗಿಟ್ಟುಕೊಂಡ ಬಿಜೆಪಿ, ಹರಿಯಾಣದಲ್ಲಿ ಕಾಂಗ್ರೆಸ್ ಸೋಲುತ್ತಿದ್ದಂತೆ ಜಿಲೇಬಿ ಮೂಲಕ ಟ್ರೋಲ್ ಮಾಡಿದೆ. ರಾಹುಲ್ ಗಾಂಧಿ ಇನ್ನುಮುಂದೆ ಜಿಲೇಬಿ ಮಾರುತ್ತಾರೆ ಎನ್ನುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.