ADVERTISEMENT

ಮಹಾರಾಷ್ಟ್ರ ರಾಜಕೀಯ | ಬಿಜೆಪಿ–ಶಿವಸೇನೆ ಮೈತ್ರಿಯೇ ಸರ್ಕಾರ ರಚಿಸಲಿ: ಶರದ್‌ ಪವಾರ್

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 7:55 IST
Last Updated 6 ನವೆಂಬರ್ 2019, 7:55 IST
   

ಮುಂಬೈ:ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ತಪ್ಪಿಸಲುಬಿಜೆಪಿ ಮತ್ತು ಶಿವಸೇನಾ ಮೈತ್ರಿ ಸರ್ಕಾರ ರಚಿಸುವುದು ಹೊರತುಪಡಿಸಿ ಬೇರೆ ಮಾರ್ಗವೇ ಇಲ್ಲ ಎಂದು ಹೇಳುವ ಮೂಲಕ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ಶಿವಸೇನೆ–ಎನ್‌ಸಿಪಿ ಮೈತ್ರಿ ಸರ್ಕಾರ ರಚನೆಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

‘ಬಿಜೆಪಿ–ಶಿವಸೇನಾಗೆ ಸರ್ಕಾರ ರಚಿಸಲು ಜನಾದೇಶ ಸಿಕ್ಕಿದೆ. ಅದರಂತೆ ಅವರು ಸರ್ಕಾರ ರಚಿಸಬೇಕು. ನಮಗೆ ಪ್ರತಿಪಕ್ಷ ಸ್ಥಾನದಲ್ಲಿ ಕೆಲಸ ಮಾಡಲು ಜನರು ಹೇಳಿದ್ದಾರೆ. ಅಲ್ಲಿ ಕುಳಿತು ರಾಜ್ಯದ ಅಭಿವೃದ್ಧಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದು ಶರದ್ ಪವಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶಿವಸೇನಾ ನಾಯಕ ಸಂಜಯ್ ರಾವುತ್ ನನ್ನನ್ನು ಭೇಟಿಯಾದ್ದು ನಿಜ. ನಾವು ಮುಂಬರುವ ರಾಜ್ಯಸಭೆ ಕಲಾಪದ ಬಗ್ಗೆ ಮಾತನಾಡಿದೆವು. ನಾವು ಸಮಾನ ನಿಲುವು ತೆಗೆದುಕೊಳ್ಳಬೇಕಾದ ಕೆಲ ವಿಚಾರಗಳಿದ್ದವು ಎಂದು ಅವರು ಮಾಧ್ಯಮಗಳ ಗಮನ ಸೆಳೆದ ತಮ್ಮ ಮತ್ತು ಸಂಜಯ್‌ ರಾವುತ್ ಭೇಟಿಯ ಬಗ್ಗೆ ವಿವರಣೆ ನೀಡಿದರು.

ADVERTISEMENT
ಶಿವಸೇನಾ ನಾಯಕರಾದ ಸಂಜಯ್‌ ರಾವುತ್ ಮತ್ತು ಉದ್ಧವ್‌ ಠಾಕ್ರೆ

ಬಿಜೆಪಿ ಜೊತೆಗೆ ಚೌಕಾಸಿ ಇಲ್ಲ ಎಂದ ಶಿವಸೇನಾ

‘ಅಧಿಕಾರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಜೊತೆಗೆ ಯಾವುದೇ ಚೌಕಾಸಿಗೆ ನಾವು ಸಿದ್ಧರಿಲ್ಲ. ಚುನಾವಣೆಗೆ ಮೊದಲು ನಡೆದಿದ್ದ ಮೈತ್ರಿ ಮಾತುಕತೆ ವೇಳೆ ಮಾಡಿಕೊಂಡಿದ್ದ ಒಪ್ಪಂದವನ್ನು ಬಿಜೆಪಿ ಅನುಷ್ಠಾನಕ್ಕೆ ತರಬೇಕು. ಮುಖ್ಯಮಂತ್ರಿ ಹುದ್ದೆಯು ನಮಗೇ ಸಿಗಬೇಕು’ ಎಂದು ಶಿವಸೇನಾದ ಹಿರಿಯ ನಾಯಕ ಸಂಜಯ್ ರಾವುತ್ ಸ್ಪಷ್ಟಪಡಿಸಿದ್ದಾರೆ.

ಹಿರಿಯ ಶಿವಸೇನಾ ನಾಯಕ ಸಂಜಯ್ ರಾವುತ್ ಮಾತನಾಡಿ, ವಿಧಾನಸಭೆ ಚುನಾವಣೆಗೂ ಮುನ್ನ ಚರ್ಚಿಸಿ ಒಪ್ಪಿಕೊಳ್ಳಲಾಗಿದ್ದ ಪ್ರಸ್ತಾವನೆ ಮಾತ್ರ ನಮ್ಮ ಮುಂದಿದೆ. ಈಗ ಯಾವುದೇ ಹೊಸ ವಿಚಾರ ನಾವು ಒಪ್ಪುವುದಿಲ್ಲ.ಎರಡೂ ಪಕ್ಷಗಳು ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಹುದ್ದೆ ಕುರಿತು ಒಪ್ಪಂದ ಮಾಡಿಕೊಂಡಿದ್ದವು.ಅದಾದ ಬಳಿಕವೇ ನಾವು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದೆವು ಎಂದು ತಿಳಿಸಿದ್ದಾರೆ.

ಮಂಗಳವಾರಮಾತನಾಡಿದ್ದ ರಾವುತ್, ಶೀಘ್ರವೇ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಶಿವಸೇನಾದವರೇ ಮುಖ್ಯಮಂತ್ರಿಯಾಗಲಿದ್ದಾರೆ. ಇದು ನ್ಯಾಯ ಮತ್ತು ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ಗೆಲುವು ನಮ್ಮದೇ ಎಂದು ಹೇಳಿದ್ದರು.

ಎರಡು ಪಕ್ಷಗಳು ಮುಖ್ಯಮಂತ್ರಿ ಹುದ್ದೆಯನ್ನು ಸಮಾನ ಅವಧಿಗೆ ಹಂಚಿಕೆ ಮತ್ತು ಸಚಿವ ಸ್ಥಾನಗಳನ್ನು ಸಮಾನವಾಗಿಹಂಚಿಕೊಳ್ಳುವುದಾಗಿ ಮಾತುಕತೆ ನಡೆದಿತ್ತು ಎಂದು ಶಿವಸೇನಾ ಹೇಳಿದರೆ ಇತ್ತ ಬಿಜೆಪಿ ಈ ರೀತಿಯ ಯಾವುದೇ ಒಪ್ಪಂದವಾಗಿಲ್ಲ ಎಂದು ಹೇಳುತ್ತಿದೆ.

ರಾವುತ್ ಹೇಳಿಕೆಯು ಹೊರಬೀಳುತ್ತಿದ್ದಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಕಚೇರಿಗೆ ತೆರಳಿ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದಾರೆ. ಮೂಲಗಳ ಪ್ರಕಾರ ಸುಮಾರು 45 ನಿಮಿಷ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮತ್ತು ಶಿವಸೇನಾ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡು ಕ್ರಮವಾಗಿ 105 ಮತ್ತು 56 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದವು. ಎನ್‌ಸಿಪಿ 54 ಶಾಸಕರು ಮತ್ತು ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.