ADVERTISEMENT

ನಿತೀಶ್ ಮಸೂದೆಯನ್ನು ವಿರೋಧಿಸಿದರೆ ಬಿಜೆಪಿ ಬೆಂಬಲ ಹಿಂತೆಗೆದುಕೊಳ್ಳಲಿ- ರಾವುತ್

ಪಿಟಿಐ
Published 18 ಜುಲೈ 2021, 16:26 IST
Last Updated 18 ಜುಲೈ 2021, 16:26 IST
ಶಿವಸೇನೆ ಸಂಸದ ಸಂಜಯ್ ರಾವುತ್
ಶಿವಸೇನೆ ಸಂಸದ ಸಂಜಯ್ ರಾವುತ್   

ಮುಂಬೈ: ಜನಸಂಖ್ಯೆ ನಿಯಂತ್ರಣಕ್ಕಾಗಿ ಉತ್ತರಪ್ರದೇಶ ಸರ್ಕಾರ ಕರಡು ಮಸೂದೆ ರೂಪಿಸಿರುವುದನ್ನು ಸ್ವಾಗತಿಸಿರುವ ಶಿವಸೇನೆ ಸಂಸದ ಸಂಜಯ್ ರಾವುತ್, ಜೆಡಿಯು ನಾಯಕ ಈ ಮಸೂದೆಯನ್ನು ವಿರೋಧಿಸಿದರೆ ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಅಥವಾ ಸರ್ಕಾರದಿಂದ ಯಾವುದೇ ರೀತಿಯ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುತ್ತದೆ.

ಸೇನಾ ಮುಖವಾಣಿ ಸಾಮ್ನಾದಲ್ಲಿನ ಅವರ ಸಾಪ್ತಾಹಿಕ ಅಂಕಣದಲ್ಲಿ, ಈ ಉದ್ದೇಶಿತ ಮಸೂದೆಯನ್ನು ಪ್ರಾಮಾಣಿಕ ಉದ್ದೇಶದಿಂದಲೇ ತರಲಾಗುತ್ತಿದೆಯೇ? ಮತ್ತು (ಜನಸಂಖ್ಯಾ ನಿಯಂತ್ರಣದ) ಈ ವಿಷಯವು ಜಾತಿ, ಧರ್ಮ ಅಥವಾ ರಾಜಕೀಯವನ್ನು ಮೀರಿರಬೇಕು ಎಂದು ಹೇಳಿದ್ದಾರೆ. 'ರಾಮ ಮಂದಿರದ ಸಮಸ್ಯೆಯನ್ನು ಬಗೆಹರಿಸಲಾಗಿದೆ ಆದ್ದರಿಂದ ಆ ವಿಷಯ ಮುಂದಿಟ್ಟು ಮತ ಕೇಳಲಾಗುವುದಿಲ್ಲ. ಹಾಗಾಗಿ ಜನಸಂಖ್ಯೆ ನಿಯಂತ್ರಣ ಮಸೂದೆಯು ವಿಧಾನಸಭಾ ಚುನಾವಣೆಗೆ (ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ) ಮುಂಚಿತವಾಗಿ ಮತದಾರರನ್ನು ಧ್ರುವೀಕರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ' ಎಂದು ರಾವುತ್ ತಿಳಿಸಿದ್ದಾರೆ.

ADVERTISEMENT

ಉತ್ತರ ಪ್ರದೇಶ ಮತ್ತು ಬಿಹಾರದ ಜನಸಂಖ್ಯೆಯು ಸುಮಾರು 15 ಕೋಟಿಯಷ್ಟಿದೆ ಮತ್ತು ಹೆಚ್ಚಿನ ಜನರು ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಈ ರಾಜ್ಯಗಳಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. 'ಯೋಗಿ ಆದಿತ್ಯನಾಥ್ ಅವರ ಈ ಕ್ರಮಕ್ಕೆ ಅಭಿನಂದಿಸಬೇಕು ಮತ್ತು ನಿತೀಶ್ ಕುಮಾರ್ ಈ ಮಸೂದೆಯನ್ನು ವಿರೋಧಿಸಿದರೆ, ಅವರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಳ್ಳಬೇಕು' ಎಂದು ಹೇಳಿದ್ದಾರೆ.

1947ರಲ್ಲಿ ಸ್ವಾತಂತ್ರ್ಯದ ನಂತರ ಭಾರತದ ವಿಭಜನೆಯನ್ನು ನೆನಪಿಸಿಕೊಂಡ ರಾವುತ್, ದೇಶವು ಜಾತ್ಯತೀತವಾಯಿತು. 'ಹಿಂದೂಗಳು ಜಾತ್ಯತೀತವಾದಿಗಳಾಗಿ ಬದುಕಲು ಒತ್ತಾಯಿಸಲಾಯಿತು. ಆದರೆ ಮುಸ್ಲಿಮರು ಮತ್ತು ಇತರ ಧರ್ಮಗಳ ಜನರು ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಿದರು. ಈ ಜನರು ಜನಸಂಖ್ಯೆ ನಿಯಂತ್ರಣ ಮತ್ತು ಕುಟುಂಬ ಯೋಜನೆಯನ್ನು ನಂಬುವುದಿಲ್ಲ. ಅವರ ಈ ಸ್ವಾತಂತ್ರ್ಯವು ಒಂದಕ್ಕಿಂತ ಹೆಚ್ಚು ಜನ ಹೆಂಡತಿಯರನ್ನು ಮತ್ತು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವಂತಾಯಿತು. ದೇಶದ ಜನಸಂಖ್ಯೆಯು ಹೆಚ್ಚಾಗಿದೆ. ಆದರೆ ಅವರಲ್ಲಿ ಹೆಚ್ಚಿನವರು ಅನಕ್ಷರಸ್ಥರು ಮತ್ತು ನಿರುದ್ಯೋಗಿಗಳಾಗಿ ಉಳಿದಿದ್ದಾರೆ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.