ನವದೆಹಲಿ: ‘ಬಾಂಗ್ಲಾದೇಶದ ಪರಿಸ್ಥಿತಿ ಭಾರತಕ್ಕೂ ಬರಬಹುದು’ ಎಂಬ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಅವರ ಹೇಳಿಕೆಯನ್ನು ಬುಧವಾರ ಖಂಡಿಸಿರುವ ಬಿಜೆಪಿ, ‘ಖುರ್ಷೀದ್ ಅರಾಜಕತೆಯ ಪರವಾಗಿದ್ದಾರೆ’ ಎಂದು ಟೀಕಿಸಿದೆ.
ಮಂಗಳವಾರ ರಾತ್ರಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಖರ್ಷೀದ್, ‘ಮೇಲ್ನೋಟಕ್ಕೆ ದೇಶದಲ್ಲಿ ಎಲ್ಲವೂ ಸಹಜವಾಗಿಯೇ ಇದೆ. ಆದರೆ ಬಾಂಗ್ಲಾದೇಶದ ಸ್ಥಿತಿ ಭಾರತಕ್ಕೂ ಒದಗಿ ಬರಬಹುದು’ ಎಂದು ಹೇಳಿದ್ದರು.
‘ಇದು ಅರಾಜಕತೆಯ ಪರವಾದ ಹೇಳಿಕೆ. ಇದನ್ನು ಒಂದು ರೀತಿಯಲ್ಲಿ ದೇಶದ್ರೋಹ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ತನ್ನ ವೈಫಲ್ಯಗಳನ್ನು ಮರೆಮಾಚಲು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕ’ ಎಂದು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರುಡಿ ಅವರು ಟೀಕಿಸಿದ್ದಾರೆ.
'ಖುರ್ಷೀದ್ ತಮ್ಮ ಪಕ್ಷದ ಪರವಾಗಿ ಎಚ್ಚರಿಕೆ ನೀಡಿದ್ದಾರೆ. ಇದು ಗಂಭೀರ ವಿಷಯ. ನಾವೆಲ್ಲರೂ ನೆರೆಯ ದೇಶದಲ್ಲಿ ಅರಾಜಕತೆಯ ಪರಿಸ್ಥಿತಿಯನ್ನು ನೋಡುತ್ತಿದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ನಮ್ಮ ದೇಶದಲ್ಲಿಯೂ ಇಂತಹ ಪರಿಸ್ಥಿತಿ ಬರಲಿ ಎಂದು ಆಶಿಸುತ್ತಿದೆ’ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಕೂಡ ಆ ಕಾರ್ಯಕ್ರಮದಲ್ಲಿ ಇದ್ದರು. ಈ ಹೇಳಿಕೆಯನ್ನು ಅವರು ಬೆಂಬಲಿಸಿದಂತಿದೆ. ಕಾಂಗ್ರೆಸ್‌ನ ಸಿದ್ಧಾಂತವೇನು, ದೇಶದಲ್ಲಿ ಗಲಭೆಗಳು ನಡೆಯುತ್ತವೆ, ಪ್ರಧಾನಿ ಮೇಲೆ ದಾಳಿ ನಡೆಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅವರು ಯಾಕೆ ಈ ರೀತಿ ಹೇಳಿದ್ದಾರೆ’ ಎಂದು ಪ್ರಶ್ನಿಸಿದರು.
ಖುರ್ಷೀದ್ ಹೇಳಿಕೆ ಬಗ್ಗೆ ಶಶಿ ತರೂರ್ ಅವರನ್ನು ಪ್ರಶ್ನಿಸಿದಾಗ, ‘ಖುರ್ಷೀದ್ ಮಾತಿನ ಅರ್ಥವೇನೆಂದು ಅವರ ಬಳಿಯೇ ಕೇಳಬೇಕು. ಬೇರೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದು ನನ್ನ ಕೆಲಸವಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.