ADVERTISEMENT

₹12 ಕೋಟಿ ಅಕ್ರಮ ಸಂಪತ್ತಿನ ಬಗ್ಗೆ ವಿವರಣೆ ಕೊಡಿ: ಪ್ರಿಯಾಂಕಾಗೆ ಕುಟುಕಿದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2024, 9:50 IST
Last Updated 24 ಅಕ್ಟೋಬರ್ 2024, 9:50 IST
   

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಪರೋಕ್ಷವಾಗಿ ಕುಟುಕಿರುವ ಬಿಜೆಪಿ ನಾಯಕ ಗೌರವ್‌ ಗುಪ್ತಾ, ‘ಈ ಅಕ್ರಮ ಸಂಪತ್ತಿನ ಕುರಿತು ಗಾಂಧಿ ಕುಟುಂಬ ವಿವರಣೆ ಕೊಡಬೇಕು’ ಎಂದಿದ್ದಾರೆ.

ಕೇರಳದ ವಯನಾಡ್‌ ಲೋಕಸಭಾ ಉಪಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ಗಾಂಧಿ ಅವರು, ₹11.99 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಪ್ತಾ, ‘ಬೂಟಾಟಿಕೆ ಏನೆಂಬುವುದನ್ನು ಗಾಂಧಿ ಕುಟುಂಬವನ್ನು ನೋಡಿ ಕಲಿಯಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಈ ಅಕ್ರಮ ಸಂಪತ್ತಿನ ಮೂಲ ಯಾವುದೆಂದು ಇಡೀ ದೇಶ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲಿ ಕೇಳುತ್ತಿದೆ’ ಎಂದಿದ್ದಾರೆ.

ಪ್ರಿಯಾಂಕಾ ಅವರು ಕಳೆದ ಹಣಕಾಸು ವರ್ಷದಲ್ಲಿ ₹46.39 ಲಕ್ಷ ಆದಾಯ ಗಳಿಸಿದ್ದು, ಒಟ್ಟು ₹11.99 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಪತಿ ರಾಬರ್ಟ್‌ ವಾದ್ರಾ ಅವರ ಆದಾಯದಲ್ಲಿ ಕುಸಿತ ಕಂಡುಬಂದಿದ್ದು, 2019–20ನೇ ಹಣಕಾಸು ವರ್ಷದಲ್ಲಿ ಅವರ ಆದಾಯ ₹55.58 ಲಕ್ಷ ಇತ್ತು. ಆದರೆ, 2023–24ನೇ ಹಣಕಾಸು ವರ್ಷದಲ್ಲಿ ಆದಾಯವು ₹15.09 ಲಕ್ಷಕ್ಕೆ ಇಳಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.