ರಾಂಚಿ: ‘ಜಾರ್ಖಂಡ್ ರಾಜ್ಯವನ್ನು ಎರಡು ದಶಕಗಳ ಕಾಲ ಲಿಂಬೆಹಣ್ಣಿನಂತೆ ಹಿಂಡಿದ ಬಿಜೆಪಿ, ಬಡ ರಾಜ್ಯದ ಬೆನ್ನೆಲುಬು ಮುರಿದಿದೆ’ ಎಂದು ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.
‘ಶಾಸಕರು ಹಾಗೂ ಸಂಸದರನ್ನು ಖರೀದಿಸುವ ಮೂಲಕ ರಾಜ್ಯದಲ್ಲಿನ ಸರ್ಕಾರ ಪತನಗೊಳಿಸಲು ಯತ್ನಿಸಿದೆ. ಡಬಲ್ ಎಂಜಿನ್ ಸರ್ಕಾರ ರಚಿಸುವ ಹುನ್ನಾರದಿಂದ ದೇಶದ ಒಕ್ಕೂಟ ರಚನೆಯನ್ನೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಾಶಗೊಳಿಸಿದೆ. ಬಡ ರಾಜ್ಯವಾದ ಜಾರ್ಖಂಡ್ ಹಸು ಸಾಕಿದರೆ, ಅವರು ಹಾಲು ಕರೆದುಕೊಳ್ಳುತ್ತಿದ್ದರು. ಜಾರ್ಖಂಡ್‌ನ ನೈಸರ್ಗಿಕ ಸಂಪತ್ತು ದೋಚಿದ್ದಾರೆ. ಆದರೆ ಅದು ಇನ್ನು ಮುಂದೆ ನಡೆಯದು’ ಎಂದು ಎಚ್ಚರಿಕೆ ನೀಡಿದರು.
‘ಜಾರ್ಖಂಡ್ ರಾಜ್ಯದಲ್ಲಿ ಕಲ್ಲಿದ್ದಲ್ಲು, ಕಬ್ಬಿಣ, ಬಕ್ಸೈಟ್, ಡೊಲೊಮೈಟ್ ನಿಕ್ಷೇಪಗಳು ಹೇರಳವಾಗಿವೆ. ಆದರೆ ಕೇಂದ್ರದ ಜಿಎಸ್‌ಟಿ ನೀತಿಯಿಂದಾಗಿ ರಾಜ್ಯದ ಆದಾಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ರಾಜ್ಯದ ಆರ್ಥಿಕ ಅಗತ್ಯಗಳಿಗೆ ಕೇಂದ್ರ ಎಂದೂ ನೆರವಾಗಿಲ್ಲ. ಕಲ್ಲಿದ್ದಲ್ಲು ಬಾಕಿ ₹1.36 ಲಕ್ಷ ಕೋಟಿಯನ್ನು ರಾಜ್ಯಕ್ಕೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಡಿಕೊಂಡ ಹಲವು ಮನವಿಗಳಿಗೆ ಈವರೆಗೂ ಸ್ಪಂದನೆ ದೊರೆತಿಲ್ಲ’ ಎಂದು ಸೊರೇನ್ ಆಕ್ರೋಶ ವ್ಯಕ್ತಪಡಿಸಿದರು.
‘ಅಭಿವೃದ್ಧಿ, ಆರ್ಥಿಕ ಪ್ರಗತಿ ಹಾಗೂ ಉದ್ಯೋಗ ನೀಡುವಂತ ಯಾವುದೇ ಯೋಜನೆ ಹೊಂದದ ಬಿಜೆಪಿ, ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಹಿಂದೂ ಹಾಗೂ ಮುಸ್ಲಿಮರ ನಡುವೆ ದ್ವೇಷ ಭಾವ ಮೂಡಿಸುತ್ತಿದೆ, ಅಧಿಕಾರ ಪಡೆಯಲು ಸಮುದಾಯಗಳ ನಡುವೆ ವಿಷ ಬೀಜ ಬಿತ್ತುತ್ತಿದೆ’ ಎಂದು ಆರೋಪಿಸಿದರು.
‘ನಾವು ಅಧಿಕಾರಕ್ಕೆ ಬಂದ ನಂತರ ಇಲ್ಲಸಲ್ಲದ ಆರೋಪಗಳನ್ನು ಬಿಜೆಪಿ ಮಾಡಿದೆ. ಅಸಂಬದ್ಧ ಆರೋಪಗಳು ಹಾಗೂ ಸಂಚು ಹೆಣೆದಿದೆ. ನಮ್ಮ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಶಾಸಕರನ್ನು ಖರೀದಿಸಿದ್ದಾರೆ. ಆದರೆ ಜನರ ಆಶೀರ್ವಾದದಿಂದ ನಾವು ಸದೃಢರಾಗಿದ್ದೇವೆ’ ಎಂದು ಸೊರೇನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.