ADVERTISEMENT

ಮೈತ್ರಿ ಮುರಿದ ಬಿಜೆಪಿ: ರಾಜ್ಯಪಾಲರ ಆಡಳಿತದತ್ತ ಜಮ್ಮು–ಕಾಶ್ಮೀರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 19:44 IST
Last Updated 19 ಜೂನ್ 2018, 19:44 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ‍ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರದಿಂದ ಬಿಜೆಪಿ ಹಿಂದಕ್ಕೆ ಸರಿದಿದೆ. ರಾಜ್ಯದ ಆಡಳಿತವನ್ನು ರಾಜ್ಯಪಾಲರ ಕೈಗೆ ಒಪ್ಪಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇದರೊಂದಿಗೆ ಆ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿದೆ.

ಮೈತ್ರಿಕೂಟದಿಂದ ಬಿಜೆಪಿ ಹೊರನಡೆದ ತಕ್ಷಣವೇ, ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ.

ಮೆಹಬೂಬಾ ಅವರ ಆಡಳಿತದಲ್ಲಿ ಮೂಲಭೂತವಾದ ಹೆಚ್ಚಾಗಿದೆ, ಭಯೋತ್ಪಾದನಾ ಚಟುವಟಿಕೆ ತೀವ್ರಗೊಂಡಿದೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾರಣಕ್ಕೆ ಸರ್ಕಾರದಿಂದ ಹೊರನಡೆದಿರುವುದಾಗಿ ಬಿಜೆಪಿ ಹೇಳಿದೆ.‌

ADVERTISEMENT

ಮೂರು ವರ್ಷದ ಹಿಂದೆ ರಚನೆಯಾದ ಸರ್ಕಾರದಿಂದ ಹೊರಗೆ ಬರುವ ಅಚ್ಚರಿಯ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರ ಉಸ್ತುವಾರಿ ಹೊಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್‌ ಪ್ರಕಟಿಸಿದರು.

ಮೈತ್ರಿಕೂಟದಲ್ಲಿ ಮುಂದುವರಿದರೆ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈತ್ರಿ ಮುರಿದುಕೊಳ್ಳಲೇಬೇಕಾದ ಸ್ಥಿತಿಯನ್ನು ಮಿತ್ರಪಕ್ಷ ಪಿಡಿಪಿ ಸೃಷ್ಟಿಸಿತು ಎಂದು ಅವರು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕದ ಮುಖಂಡರ ಜತೆ ದೆಹಲಿಯಲ್ಲಿ ಪಕ್ಷಾಧ್ಯಕ್ಷಅಮಿತ್‌ ಶಾ ಸಭೆ ನಡೆಸಿದ ಬಳಿಕ ನಿರ್ಧಾರ ಪ್ರಕಟಿಸಲಾಗಿದೆ. ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನಪ್ರಧಾನಿ ಮೋದಿ ಜತೆಗೂ ಸಮಾಲೋಚನೆ ನಡೆಸಲಾಗಿತ್ತು.

‘ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮತ್ತು ತ್ವರಿತ ಪ್ರಗತಿಗೆ ಉತ್ತೇಜನ ನೀಡುವುದಕ್ಕಾಗಿ ಪಿಡಿಪಿ ಜತೆಗೆ ಕೈಜೋಡಿಸಲಾಗಿತ್ತು. ಆದರೆ, ಭಯೋತ್ಪಾದನೆ, ಹಿಂಸಾಚಾರ ಮತ್ತು ಮೂಲಭೂತವಾದ ಹೆಚ್ಚುತ್ತಲೇ ಇದೆ. ಜನರ ಮೂಲಭೂತ ಹಕ್ಕುಗಳು ಅಪಾಯದಲ್ಲಿವೆ. ಕೇಂದ್ರ ಸರ್ಕಾರದ ಬೆಂಬಲ ಇದ್ದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಪಿಡಿಪಿ ಸೋತಿದೆ’ ಎಂದು ರಾಮ್‌ಮಾಧವ್‌ ವಿವರಿಸಿದ್ದಾರೆ.

ಹಿರಿಯ ಪತ್ರಕರ್ತ ಶುಜಾತ್‌ ಬುಖಾರಿ ಅವರನ್ನು ಕಳೆದ ವಾರ ಶ್ರೀನಗರದಲ್ಲಿ ಹತ್ಯೆ ಮಾಡಲಾಗಿತ್ತು. ಇದನ್ನು ಉಲ್ಲೇಖಿಸಿದ ರಾಮ್‌ಮಾಧವ್, ಹತ್ಯೆ ನಡೆದು ಹಲವು ದಿನಗಳಾದರೂ ತಪ್ಪಿತಸ್ಥರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದರು.

‘ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ಏನೇನು ಮಾಡಲು ಸಾಧ್ಯವೋ ಅವನ್ನೆಲ್ಲ ಮಾಡಲಾಗಿದೆ. ಕೇಂದ್ರ ಸರ್ಕಾರವು ಸಂಧಾನಕಾರರನ್ನು ನೇಮಿಸಿತ್ತು. ರಾಜ್ಯ ಸರ್ಕಾರ ಕೇಳಿದ್ದೆಲ್ಲವನ್ನೂ ಕೊಡಲಾಗಿದೆ’ ಎಂದಿರುವ ರಾಮ್‌ಮಾಧವ್‌, ಸರ್ಕಾರ ಪತನದ ಸಂಪೂರ್ಣ ಹೊಣೆಯನ್ನು ಪಿಡಿಪಿ ಮೇಲೆ ಹೊರಿಸಿದ್ದಾರೆ.

ರಾಜ್ಯದ ವಿನಾಶ ಖಚಿತ ಎಂಬುದು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಾಲಿಟ್ಟಾಗಲೇ ಅರಿವಾಗಿತ್ತು ಎಂದು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ಸರ್ಕಾರ ರಚನೆ ಸಾಧ್ಯತೆಗಳು

87 ಶಾಸಕರಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಸರಳ ಬಹುಮತದ ಹತ್ತಿರ ಇಲ್ಲ. ಸರಳ ಬಹುಮತಕ್ಕೆ 44 ಶಾಸಕರ ಬೆಂಬಲ ಇರಬೇಕು. ಪಿಡಿಪಿ ನೇತೃತ್ವದ ಸರ್ಕಾರದಿಂದ ಹೊರಗೆ ಬಂದಿರುವ ಬಿಜೆಪಿ, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರಬೇಕು ಎಂದು ಒತ್ತಾಯಿಸಿದೆ. ಹಾಗಾಗಿ ಆ ಪಕ್ಷ ಬೇರೆ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆ ಇಲ್ಲ.

* ನ್ಯಾಷನಲ್ ಕಾನ್ಫರೆನ್ಸ್‌ (15) ಮತ್ತು ಕಾಂಗ್ರೆಸ್‌ (12) ಬೆಂಬಲ ನೀಡಿದರೆ ಪಿಡಿಪಿ ಹೊಸ ಸರ್ಕಾರ ರಚಿಸಬಹುದು. ಆದರೆ, ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್‌ ಈಗಾಗಲೇ ಸ್ಪಷ್ಟಪಡಿಸಿದೆ.

* ನ್ಯಾಷನಲ್ ಕಾನ್ಫರೆನ್ಸ್‌ ಮತ್ತು ಕೆಲವು ಪಕ್ಷೇತರರು ಬೆಂಬಲ ನೀಡಿದರೆ ಅಧಿಕಾರ ಪಿಡಿಪಿ ಬಳಿಯೇಉಳಿಯಬಹುದು.

* ವಿಶ್ವಾಸಮತದ ಸಂದರ್ಭದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಶಾಸಕರು ಗೈರುಹಾಜರಾದರೆ ಪಿಡಿಪಿ ಸರ್ಕಾರ ವಿಶ್ವಾಸಮತ ಗೆಲ್ಲುವುದಕ್ಕೆ ಅವಕಾಶ ಇದೆ.

* ಯಾವುದೇ ಸಮೀಕರಣಗಳು ಸಾಧ್ಯವಾಗದಿದ್ದರೆ ಜಮ್ಮು ಮತ್ತು ಕಾಶ್ಮೀರದ ಆಡಳಿತ ರಾಜ್ಯಪಾಲರ ನಿಯಂತ್ರಣಕ್ಕೆ ಹೋಗಲಿದೆ.

* *ಆಘಾತವಾಗಿಲ್ಲ. ಯಾಕೆಂದರೆ ನಮ್ಮದು ಅಧಿಕಾರಕ್ಕಾಗಿ ಮಾಡಿಕೊಂಡ ಮೈತ್ರಿ ಆಗಿರಲಿಲ್ಲ. ಜನರಿಗಾಗಿ ಕೆಲಸ ಮಾಡಿದ್ದೇವೆ

–ಮೆಹಬೂಬಾ ಮುಫ್ತಿ, ನಿರ್ಗಮಿತ ಮುಖ್ಯಮಂತ್ರಿ

* ರಾಜ್ಯದ ಹದಗೆಟ್ಟಿರುವಪರಿಸ್ಥಿತಿ ನಿಯಂತ್ರಣಕ್ಕೆ ತರುವುದಕ್ಕಾಗಿ ಮೈತ್ರಿಯಿಂದ ಹೊರಬರಲಾಗಿದೆ

–ರಾಮ್‌ಮಾಧವ್‌, ಬಿಜೆಪಿ ಪ‍್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.