ಕೋಲ್ಕತ್ತ: ‘ಪಶ್ಚಿಮ ಬಂಗಾಳವು ಮಹಿಳೆಯರಿಗೆ ದೇಶದಲ್ಲೇ ಅತ್ಯಂತ ಸುರಕ್ಷಿತ ರಾಜ್ಯ’ ಎಂದು ಹೇಳಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಂದೇಶ್‌ಖಾಲಿಯಲ್ಲಿ ನಡೆದ ಘಟನಾವಳಿಗಳ ಕುರಿತು ಬಿಜೆಪಿ ಸುಳ್ಳುಸುದ್ದಿ ಹರಡುತ್ತಿದೆ ಎಂದು ಅವರು ಆರೋಪಿಸಿದರು.
ಕೊಲ್ಕತ್ತದಲ್ಲಿ ನಡೆದ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಸಂದೇಶ್‌ಖಾಲಿ ಕುರಿತು ತಪ್ಪು ಸಂದೇಶಗಳನ್ನು ಹರಿಬಿಡಲಾಗುತ್ತದೆ. ಘಟನೆಗಳನ್ನು ತಿರುಚಲಾಗಿದೆ. ಅಲ್ಲಿ ನಡೆದಿದೆ ಎನ್ನಲಾದ ಘಟನೆಗಳು ನಮ್ಮನ್ನು ತಲುಪಲಿಲ್ಲ. ಆದರೆ ಅವುಗಳ ಕುರಿತು ನಮಗೆ ಮಾಹಿತಿ ದೊರಕುತ್ತಿದ್ದಂತೆ ಕ್ರಮ ಕೈಗೊಂಡಿದ್ದೇವೆ. ಟಿಎಂಸಿ ಕಾರ್ಯಕರ್ತರು ತಪ್ಪು ಮಾಡಿದರೆ ಅವರನ್ನು ಬಂಧಿಸಲು ನಾನು ಹಿಂಜರಿಯುವುದಿಲ್ಲ’ ಎಂದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದ ಅವರು, ‘ಬುಧವಾರ ರಾಜ್ಯಕ್ಕೆ ಬಂದಿದ್ದ ನೀವು ಮಹಿಳೆಯರ ಸುರಕ್ಷತೆ ಕುರಿತು ನಮ್ಮ ಸರ್ಕಾರಕ್ಕೆ ಪಾಠ ಹೇಳಿದ್ದೀರಿ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಅವರನ್ನು ದಹಿಸಲಾಗಿದೆ. ಈ ಕುರಿತು ಬಿಜೆಪಿ ನಾಚಿಕೆಪಡಬೇಕು’ ಎಂದರು.
ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದ ಮೋದಿ ಅವರು ‘ಸಂದೇಶ್‌ಖಾಲಿಯ ಬಿರುಗಾಳಿ ರಾಜ್ಯದಾದ್ಯಂತ ಬೀಸಲಿದೆ. ನಾರಿ ಶಕ್ತಿಯು ಟಿಎಂಸಿಯನ್ನು ಮಣಿಸಲಿದೆ’ ಎಂದಿದ್ದರು. ಈ ಹಿನ್ನೆಲೆಯಲ್ಲಿ ಮಮತಾ ವಾಗ್ದಾಳಿ ನಡೆಸಿದರು.
‘ರಾಜ್ಯದಲ್ಲಿ ವಿಭಜಕ ರಾಜಕೀಯ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಗೆ ಟಿಎಂಸಿ ಮೇಲೆ ಸಿಟ್ಟು. ರಾಜ್ಯಕ್ಕೆ ಅವರು ಭದ್ರತಾ ಪಡೆಯ 400 ತಂಡಗಳನ್ನು ಕಳಿಸಿದ್ದರು. ಆದರೆ ಮಣಿಪುರ ಹೊತ್ತಿ ಉರಿದರೂ ಒಂದೂ ತಂಡವನ್ನು ಕಳಿಸಲಿಲ್ಲ‘ ಎಂದು ಕಿಡಿಕಾರಿದರು.
ಟಿಎಂಸಿ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೂ ರ‍್ಯಾಲಿಯಲ್ಲಿ ಭಾಗಿಯಾಗಿದ್ದರು.
‘ನ್ಯಾ. ಗಂಗೋಪಾಧ್ಯಾಯ್ ಸೋಲು ಖಚಿತ‘
ಗುರುವಾರವಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ಕಲ್ಕತ್ತ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ್ ಅವರ ವಿರುದ್ಧವೂ ಟೀಕಾಪ್ರಹಾರ ನಡೆಸಿದರು. ತಮ್ಮ ತೀರ್ಪಿನ ಮೂಲಕ ರಾಜ್ಯದ ಸಾವಿರಾರು ಯುವಜನರ ಉದ್ಯೋಗಗಳನ್ನು ಗಂಗೋಪಾದ್ಯಾಯ ಅವರು ಕಸಿದರು ಎಂದು ಆರೋಪಿಸಿದ ಅವರು ‘ಯುವಜನರು ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಎಲ್ಲಾ ತೀರ್ಪುಗಳು ಪ್ರಶ್ನಾರ್ಥಕವಾಗಿವೆ. ನಿಮ್ಮ ಸೋಲು ಖಚಿತ’ ಎಂದರು. ‘ಲೋಕಸಭೆ ಚುನಾವಣೆಯಲ್ಲಿ ನೀವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ನಾನು ನಿಮ್ಮನ್ನು ಖಚಿತವಾಗಿ ಸೋಲಿಸುತ್ತೇವೆ’ ಎಂದರು.
ಟಿಎಂಸಿ ಸೇರಿಸ ಬಿಜೆಪಿ ಶಾಸಕ
ರಾಣಾಘಾಟ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಮುಕುಟ್ ಮಣಿ ಅಧಿಕಾರಿ ಅವರು ಬಿಜೆಪಿ ತೊರೆದು ಟಿಎಂಸಿಯನ್ನು ಗುರುವಾರ ಸೇರಿದರು. ಈ ರ‍್ಯಾಲಿಯಲ್ಲಿ ಅವರೂ ಭಾಗವಹಿಸಿದ್ದರು. ‘ಜನರಿಗಾಗಿ ಕೆಲಸ ಮಾಡಲು ಟಿಎಂಸಿ ಮಾತ್ರವೇ ವೇದಿಕೆ ಒದಗಿಸುತ್ತದೆ. ಹೀಗಾಗಿ ನಾನು ಟಿಎಂಸಿ ಸೇರಿದೆ’ ಎಂದರು. ರಾಣಾಘಾಟ್ ಕ್ಷೇತ್ರದ ಹಾಲಿ ಸಂಸದ ಜಗನ್ನಾಥ್ ಸರ್ಕಾರ್ ಅವರಿಗೇ ಬಿಜೆಪಿಯು ಪದೇಪದೆ ಟಿಕೆಟ್ ನೀಡುತ್ತಿರುವ ಕುರಿತು ಅಸಮಾಧಾನಗೊಂಡು ಮುಕುಟ್ ಅವರು ಬಿಜೆಪಿ ತೊರೆದಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.