ನವದೆಹಲಿ: ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರೊಂದಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅನುಚಿತ ವರ್ತನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಎಎಪಿ ಮುಖ್ಯಸ್ಥರ ಮೇಲೆ ಟೀಕಾಪ್ರಹಾರ ಮಾಡಿದ್ದು, ತಮ್ಮ ಸಹಾಯಕನಿಂದ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿದೆ. ಅದು ಸಾಧ್ಯವಾಗದಿದ್ದರೆ, ಕೇಜ್ರಿವಾಲ್ ಅವರೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಶಾಜಿಯಾ ಇಲ್ಮಿ, ಸ್ವಾತಿ ಮಾಲಿವಾಲ್ ಅವರ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದು, ರಾಜಿ ಮಾಡಿಕೊಳ್ಳಲು ಸ್ವಾತಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯಾ ಒಕ್ಕೂಟದ ನಾಯಕರಾದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೌನ ವಹಿಸಿರುವುದನ್ನು ಪ್ರಶ್ನಿಸಿದ್ದಾರೆ.
‘ನಿಜವಾಗಿಯೂ ಮಾಲಿವಾಲ್ ಅವರ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಹಲ್ಲೆಯಾಗಿದೆ. ಎಎಪಿಯಲ್ಲಿರುವ ಎಲ್ಲರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಕೇಜ್ರಿವಾಲ್ ಆದೇಶವಿಲ್ಲದೆ ಹಲ್ಲೆ ಸಾಧ್ಯವಿಲ್ಲ’ ಎಂದಿದ್ದಾರೆ.
ಪ್ರಕರಣದ ತನಿಖೆಗೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅರವಿಂದ ಕೇಜ್ರಿವಾಲ್ ನಿವಾಸದ ಬಳಿ ಪ್ರತಿಭಟನೆ ನಡೆಸಿದರು.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಕೇಜ್ರಿವಾಲ್ ಅವರ ಮೌನವನ್ನು ಪ್ರಶ್ನಿಸಿದ್ದು, ಕ್ರಮ ವಹಿಸುವಂತೆ ಬೇಡಿಕೆಯಿಟ್ಟಿದ್ದಾರೆ.
‘ಇದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯಾಗಿದ್ದ ಸ್ವಾತಿ ಮಾಲಿವಾಲ್ ಗೌರವದ ಪ್ರಶ್ನೆ. ನಾವು ಅವರ ಬೆಂಬಲಕ್ಕಿದ್ದೇವೆ. ಎಎಪಿ ನಾಯಕ ಸಂಜಯ್ ಸಿಂಗ್ ಪ್ರಕರಣವನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಭಾಗಿಯಾದ ಆರೋಪಿಯ ವಿರುದ್ಧ ಕೇಜ್ರಿವಾಲ್ ಯಾಕೆ ದೂರು ನೀಡುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.