ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.
ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, ಅಡ್ವಾಣಿ ಅವರನ್ನು ಅಭಿನಂದಿಸಿದ್ದಾರೆ.
'ಶ್ರೀ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡಲಾಗುವುದು ಎಂಬ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ ಕುರಿತು ಅವರೊಂದಿಗೆ ಮಾತನಾಡಿ, ಅಭಿನಂದಿಸಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಅಡ್ವಾಣಿ ಅವರಿಗೆ ಪುಷ್ಪಗುಚ್ಛ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ, 'ನಮ್ಮ ಕಾಲದ ಅತ್ಯಂತ ಆದರಣೀಯ ಆಡಳಿತಗಾರಲ್ಲಿ ಒಬ್ಬರಾದ ಅಡ್ವಾಣಿ ಅವರು, ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಚಿರಸ್ಥಾಯಿಯಾದದ್ದು. ತಳಮಟ್ಟದಿಂದ ಆರಂಭವಾದ ಅವರ ಜೀವನ ದೇಶದ ಉಪ ಪ್ರಧಾನಿಯಾಗುವವರೆಗೂ ಸಾಗಿದೆ' ಎಂದು ಶ್ಲಾಘಿಸಿದ್ದಾರೆ.
'ದೇಶದ ಗೃಹ ಸಚಿವರಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಂತ್ರಿಯಾಗಿ ಪ್ರಸಿದ್ಧಿ ಪಡೆದವರು. ಅವರ ಸಂಸದೀಯ ಪಾಲ್ಗೊಳ್ಳುವಿಕೆಯು ಆದರ್ಶಪ್ರಾಯವಾದದ್ದು' ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.