ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿಯು ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಭಾನುವಾರ) ಬಿಡುಗಡೆ ಮಾಡಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿಯು ಇತರ ಎಲ್ಲ ಪಕ್ಷಗಳಿಗಿಂತ ಭಿನ್ನವಾಗಿದೆ. ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಈ ಬಾರಿಯ ವಿಧಾನಸಭೆ ಚುನಾವಣೆಯು ಕೇವಲ ಸರ್ಕಾರವನ್ನು ಬದಲಾಯಿಸುವ ಚುನಾವಣೆಯಲ್ಲ. ಬದಲಾಗಿ ಜಾರ್ಖಂಡ್‌ನ ಭವಿಷ್ಯವನ್ನು ಖಾತ್ರಿಪಡಿಸುವ ಚುನಾವಣೆಯಾಗಿದೆ’ ಎಂದು ತಿಳಿಸಿದ್ದಾರೆ.
‘ಜಾರ್ಖಂಡ್‌ನ ಜನರು ತಮಗೆ ಭ್ರಷ್ಟಾಚಾರದಿಂದ ತುಂಬಿದ ಸರ್ಕಾರ ಬೇಕೇ ಅಥವಾ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಬಿಜೆಪಿ ಸರ್ಕಾರ ಬೇಕೇ... ಗಡಿಯಲ್ಲಿ ಒಳನುಸುಳುವಿಕೆಗೆ ಅವಕಾಶ ನೀಡುವ ಮೂಲಕ ಭೂಮಿ ಮತ್ತು ಮಹಿಳೆಯರಿಗೆ ಅಪಾಯವನ್ನುಂಟುಮಾಡುವ ಸರ್ಕಾರ ಬೇಕೇ ಅಥವಾ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಗಡಿಗಳನ್ನು ರಕ್ಷಿಸುವ ಬಿಜೆಪಿ ಸರ್ಕಾರ ಬೇಕೇ’ ಎಂಬುದನ್ನು ನಿರ್ಧರಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.
‘ನಾವು ಇಂದು 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದ್ದೇವೆ. ಬಿಜೆಪಿ ಎಲ್ಲಾ ಪಕ್ಷಗಳಿಗಿಂತ ಭಿನ್ನವಾಗಿದೆ. ಏಕೆಂದರೆ ದೇಶದ ರಾಜಕೀಯದಲ್ಲಿ ಹೇಳಿದ್ದನ್ನು ಮಾಡುವ ಏಕೈಕ ಪಕ್ಷ ನಮ್ಮದ್ದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಅದಕ್ಕಾಗಿಯೇ ಜಾರ್ಖಂಡ್‌ನ ಹಿಂದುಳಿದ ವರ್ಗದವರು, ಬಡವರು, ಆದಿವಾಸಿಗಳು, ದಲಿತರು ಬಿಜೆಪಿಯ ‘ಸಂಕಲ್ಪ ಪತ್ರ’ದತ್ತ ಹೆಚ್ಚು ಭರವಸೆಯಿಂದ ನೋಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆದಿವಾಸಿಗಳು ಸುರಕ್ಷಿತವಾಗಿಲ್ಲ. ಮಹಿಳೆಯರಿಗೆ ಭದ್ರತೆ ಇಲ್ಲ ಎಂದು ಕೇಂದ್ರ ಗೃಹ ಸಚಿವರು ಪ್ರತಿಪಾದಿಸಿದ್ದಾರೆ.
‘ಸಂತಾಲ್ ಪರಗಣದಲ್ಲಿ ಆದಿವಾಸಿಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಒಳನುಸುಳುಕೋರರು ಇಲ್ಲಿಗೆ ಬಂದು ನಮ್ಮ ಹೆಣ್ಣುಮಕ್ಕಳಿಗೆ ಆಮಿಷಗಳನ್ನು ಒಡ್ಡಿ ಮದುವೆ ಮಾಡಿಕೊಂಡು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯದಿದ್ದರೆ, ಜಾರ್ಖಂಡ್‌ನ ಸಂಸ್ಕೃತಿಯಾಗಲೀ, ಉದ್ಯೋಗ, ಭೂಮಿಯಾಗಲಿ ಉಳಿಯುವುದಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ‘ಗೋಗೋ ದೀದಿ’ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹2,100 ಆರ್ಥಿಕ ನೆರವು, ಯುವಕರಿಗೆ 5 ಲಕ್ಷ ಉದ್ಯೋಗ, ಅರ್ಹರಿಗೆ ವಸತಿ ಸೌಲಭ್ಯ, ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹500ಕ್ಕೆ ಇಳಿಕೆ ಮಾಡಲಾಗುವುದು ಹಾಗೂ ಒಂದು ವರ್ಷದಲ್ಲಿ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಅಲ್ಲದೇ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎರಡು ವರ್ಷಗಳವರೆಗೆ ಮಾಸಿಕ ₹2000 ನೆರವು ನೀಡಲಾಗುವುದು ಎಂಬ 5 ಅಂಶಗಳನ್ನು ಬಿಜೆಪಿ ಜನರ ಮುಂದಿಟ್ಟಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರು ‘ಪಂಚ ಪ್ರಾಣ’ (ಐದು ಪ್ರತಿಜ್ಞೆ) ಮೂಲಕ ಪ್ರಣಾಳಿಕೆಯ ಐದು ಅಂಶಗಳನ್ನು ಈಚೆಗೆ ಘೋಷಿಸಿದ್ದರು.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 30 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 25 ಮತ್ತು ಕಾಂಗ್ರೆಸ್ 16 ಸ್ಥಾನಗಳನ್ನು ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.