ADVERTISEMENT

ಗೋವಾದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿರುವ ಬಿಜೆಪಿ: ರಾಹುಲ್ ಗಾಂಧಿ

ಪಿಟಿಐ
Published 6 ಅಕ್ಟೋಬರ್ 2024, 9:54 IST
Last Updated 6 ಅಕ್ಟೋಬರ್ 2024, 9:54 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಮುಂಬೈ: ಬಿಜೆಪಿ ಮತ್ತು ಸಂಘ ಪರಿವಾರವು (ಆರ್‌ಎಸ್‌ಎಸ್‌) ಗೋವಾದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆ ಪ್ರಚೋದಿಸುತ್ತಿವೆ ಎಂದು ಲೋಕಸಭೆ ನಾಯಕ ರಾಹುಲ್‌ ಗಾಂಧಿ ಭಾನುವಾರ ವಾ‌ಗ್ದಾಳಿ ನಡೆಸಿದ್ದಾರೆ.

ಕ್ಯಾಥೋಲಿಕ್ ಮಿಷನರಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್‌ ಅವರಿಗೆ ನೀಡಿರುವ ಸಂತ ಪದವಿ ಮತ್ತು ಗೋವಾ ರಕ್ಷಕ (ಗೋಯೆಂಕೊ ಸಾಹಿಬ್‌) ಗೌರವವನ್ನು ಪ್ರಶ್ನಿಸಿ, ಅವರ ಅಸ್ಥಿಯನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಬೇಕು ಎಂದು
ಆರ್‌ಎಸ್‌ಎಸ್‌ನ ಗೋವಾ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವೆಲಿಂಗ್‌ಕರ್‌ ಹೇಳಿಕೆ ನೀಡಿರುವುದು ವಿವಾದ ಹುಟ್ಟು ಹಾಕಿದೆ. ಈ ಹೇಳಿಕೆ ವಿರುದ್ಧ ಗೋವಾದಲ್ಲಿ ಕ್ರೈಸ್ತರು ಪ್ರತಿಭಟನೆ
ನಡೆಸುತ್ತಿದ್ದಾರೆ.

ಇದರ ಬೆನ್ನಲ್ಲೇ, ಡಾ. ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರವನ್ನು ಟೀಕಿಸಿರುವ ರಾಹುಲ್‌ ಗಾಂಧಿ,
‘ಗೋವಾದ ಆಕರ್ಷಣೆಯು ಅದರ ನೈಸರ್ಗಿಕ ಸೌಂದರ್ಯ, ಅದರ ವೈವಿಧ್ಯ ಮಯ ಮತ್ತು ಸಾಮರಸ್ಯದಿಂದ ಕೂಡಿದ ಜನರ ಪ್ರೀತಿ ಹಾಗೂ ಆತಿಥ್ಯದಲ್ಲಿದೆ. ಆದರೆ, ದುರದೃಷ್ಟವಶಾತ್, ಬಿಜೆಪಿ ಆಡಳಿತದಲ್ಲಿ, ಈ ಸಾಮರಸ್ಯವು ದಾಳಿಗೆ ಒಳಗಾಗುತ್ತಿದೆ’ ಎಂದಿದ್ದಾರೆ.

ADVERTISEMENT

‘ಗೋವಾದಲ್ಲಿ ಬಿಜೆಪಿ ತಂತ್ರ ಸ್ಪಷ್ಟವಾಗಿದೆ; ಜನರನ್ನು ವಿಭಜಿಸಿ-ಗೋವಾದ ನೈಸರ್ಗಿಕ ಹಾಗೂ ಸಾಮಾಜಿಕ ಪರಂಪರೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ಗೋವಾ ಜನರರು ಮತ್ತು ಇಡೀ ದೇಶವು ಈ ವಿಭಜಕ ಕಾರ್ಯಸೂಚಿಯನ್ನು ನೋಡುತ್ತಿದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ನಿಂತಿದ್ದಾರೆ’ ಎಂದು ರಾಹುಲ್‌ ಹೇಳಿದರು.

ವೆಲಿಂಗ್‌ಕರ್‌ ವಿರುದ್ಧ ಪ್ರತಿಭಟನೆ

ಪಣಜಿ: ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಬಗ್ಗೆ ಅಗೌರವದ ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ರಾಜ್ಯ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವೆಲಿಂಗ್‌ಕರ್‌ ವಿರುದ್ಧ ಸ್ಥಳೀಯರು ಹಳೆ ಗೋವಾದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಸಮಾನ ಮನಸ್ಕರು ಬೆಳಿಗ್ಗೆ ಪ್ರತಿಭಟನೆ ನಡೆಸಿ, ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ದಶವಾರ್ಷಿಕ ಪ್ರದರ್ಶನ ಪೂರ್ಣಗೊಳ್ಳುವವರೆಗೆ ವೆಲಿಂಗ್‌ಕರ್‌ ಅವರನ್ನು ಗೋವಾದಿಂದ ಹೊರಹಾಕಬೇಕು ಎಂದು ಒತ್ತಾಯಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.

ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ಅಸ್ತಿಯ ಪ್ರದರ್ಶನವು ಇದೇ ನವೆಂಬರ್‌ನಿಂದ 2025ರ ಜನವರಿವರೆಗೆ ನಡೆಯಲಿದೆ.

ಶಾಂತಿ ಕಾಪಾಡಿ: ಸಿಎಸ್‌ಜೆಪಿ

ಸುಭಾಷ್ ವೆಲಿಂಗ್‌ಕರ್‌ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಮಧ್ಯೆ, ಗೋವಾ ಚರ್ಚ್‌ನ ಪ್ರಮುಖರು ರಾಜ್ಯದಲ್ಲಿ ಶಾಂತಿ ಮತ್ತು ಸಂಯಮ ಕಾಯ್ದುಕೊಳ್ಳುವಂತೆ ಕರೆ ನೀಡಿದ್ದಾರೆ.

ಗೋವಾ ಚರ್ಚ್‌ನ ಅಂಗವಾಗಿರುವ ಕೌನ್ಸಿಲ್ ಫಾರ್ ಸೋಶಿಯಲ್ ಜಸ್ಟೀಸ್ ಅಂಡ್ ಪೀಸ್ (ಸಿಎಸ್‌ಜೆಪಿ), ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

ಸಿಎಸ್‌ಜೆಪಿ ಕಾರ್ಯಕಾರಿ ಕಾರ್ಯದರ್ಶಿ ಫಾದರ್‌ ಸವಿಯೋ ಫೆರ್ನಾಂಡಿಸ್ ಅವರು, ವೆಲಿಂಗ್‌ಕರ್‌ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಕ್ಯಾಥೋಲಿಕ್ ಸಮುದಾಯ ಖಂಡಿಸುತ್ತದೆ ಎಂದಿದ್ದಾರೆ. 

ವೆಲಿಂಗ್‌ಕರ್‌ ಬಂಧನಕ್ಕೆ ಒತ್ತಾಯಿಸಿ ರಸ್ತೆ ತಡೆದ ನಂತರ ಶನಿವಾರ ತಡರಾತ್ರಿ ದಕ್ಷಿಣ ಗೋವಾದ ಮರ್ಗೋವಾ ನಗರದಲ್ಲಿ ಪೊಲೀಸರು ಪ್ರತಿಭಟನಕಾರರ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿ, ಅವರಲ್ಲಿ ಐವರನ್ನು ಬಂಧಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.