ನವದೆಹಲಿ: ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ದುರುಪಯೋಗಪಡಿಸಿಕೊಂಡು ಬಿಜೆಪಿಯು 10 ರಾಜ್ಯಗಳ ಚುನಾಯಿತ ಸರ್ಕಾರಗಳನ್ನು 'ಕದ್ದಿದೆ' ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಶುಕ್ರವಾರ ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು 2016ರ ಮಾರ್ಚ್‌ನಿಂದ 2024ರ ಮಾರ್ಚ್ ವರೆಗೆ 13 ರಾಜ್ಯಗಳ ಸರ್ಕಾರಗಳನ್ನು ಉರುಳಿಸಲು 15 ಬಾರಿ ಪ್ರಯತ್ನಿಸಿದ್ದರು. ಅದರಲ್ಲಿ 10 ಸರ್ಕಾರಗಳನ್ನು ಕೆಡವಲು ಯಶಸ್ವಿಯಾಗಿದ್ದಾರೆ. ಈ ಸರ್ಕಾರಗಳನ್ನು ಉರುಳಿಸಿದ್ದಷ್ಟೇ ಅಲ್ಲ, ಬಿಜೆಪಿಯವರು ಕದ್ದರು' ಎಂದು ದೂರಿದ್ದಾರೆ.
ಮಹಾರಾಷ್ಟ್ರದ ಅಜಿತ್ ಪವಾರ್, ಪ್ರತಾಪ್ ಸರ್‌ನಾಯಕ್ ಮತ್ತು ಹಸನ್ ಮುಶ್ರೀಫ್ ಅವರು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಿದ್ದರು. ಆದರೆ, ಅವರೆಲ್ಲ ಬಿಜೆಪಿಗೆ ಸೇರಿದ ಬಳಿಕ ಅಥವಾ ತಮ್ಮ ಮಾತೃಪಕ್ಷದಿಂದ ದೂರವಾದ ನಂತರ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಕಿಡಿಕಾರಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಜ್ರಿವಾಲ್ ಅವರು, ಬಿಜೆಪಿ ಜೊತೆಗಿನ ಸಂಬಂಧದ ಕುರಿತಾಗಿ ಆರ್‌ಎಸ್‌ಎಸ್ ಅನ್ನೂ ಪ್ರಶ್ನಿಸಿದ್ದಾರೆ.
'ಸಂಘ ಪ್ರಚಾರಕರು ತಮ್ಮ ಇಡೀ ಜೀವನವನ್ನು ಆರ್‌ಎಸ್‌ಎಸ್ ಸಿದ್ಧಾಂತಕ್ಕಾಗಿ ಮೀಸಲಿಡುತ್ತಾರೆ. ಆದರೆ, ಅದಕ್ಕೆ ಪ್ರತಿಯಾಗಿ ಅವರಿಗೆ ಏನು ಸಿಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, 'ಆರ್‌ಎಸ್‌ಎಸ್‌ನವರ ಬಗ್ಗೆ ನನಗೆ ಮರುಕುವಾಗುತ್ತದೆ' ಎಂದಿರುವ ಕೇಜ್ರಿವಾಲ್, 'ಆರ್‌ಎಸ್‌ಎಸ್‌ನವರಿಗೆ ಚುನಾವಣೆಗಳಲ್ಲಿ ಟಿಕೆಟ್ ಸಿಗುತ್ತಿಲ್ಲ. ಅವರು ಬಿಜೆಪಿ ನಾಯಕರಿಗೆ, ಕೆಲವೊಮ್ಮೆ ಎನ್‌ಸಿಪಿ ಮತ್ತು ಇನ್ನೂ ಕೆಲವೊಮ್ಮೆ ಶಿವಸೇನಾದವರಿಗೆ ಚಾಪೆ ಹಾಸುತ್ತಿದ್ದಾರೆ' ಎಂದು ತಿವಿದಿದ್ದಾರೆ.
ನಾಲ್ಕು ದಿನಗಳ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂಗ್ರ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದೆ ಭ್ರಷ್ಟರು ಎಂದು ಆರೋಪ ಮಾಡಿದ್ದವರೆಲ್ಲಾ ಈಗ ಬಿಜೆಪಿ ಸೇರುತ್ತಿದ್ದಾರೆ. ಇದನ್ನು ಆರ್‌ಎಸ್‌ಎಸ್ ಒಪ್ಪುತ್ತದೆಯೇ? ಇದರಿಂದ ಬಿಜೆಪಿಯವರಿಗೆ ನಾಚಿಕೆಯಾಗುತ್ತಿದೆಯೇ? ಎಂದು ಕೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.